ಲೆಹೆಂಗಾ, ಚಿನ್ನಾಭರಣದ ವಿಚಾರವಾಗಿ ಮದುವೆ ರದ್ದು; ಆದರೆ ವಧು-ವರರ ಕುಟುಂಬದವರು ಹೇಳಿದ್ದು ಮಾತ್ರ...

Bride
Published on

ಪಾಣಿಪತ್: ಮದುವೆಯೊಂದು ಸಂತೋಷಕರ ಸಂದರ್ಭವಾಗಿದ್ದು, ಎರಡು ಕುಟುಂಬಗಳು ಸೇರಿ ನಡೆಸುವ ಶುಭಕಾರ್ಯಕ್ಕೆ ದೂರದಿಂದ ಜನರು ಬಂದು ಆಶೀರ್ವದಿಸಿ ಹೋಗುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿದ್ದು, ದೊಡ್ಡ ಪ್ರಶ್ನೆಯಾಗಿ ಕಾಡಲು ಶುರುವಾಗಿದೆ. ಊಟ ಬಡಿಸಲು ತಡವಾಗಿದ್ದಕ್ಕೆ, ಹುಡುಗ ಡ್ಯಾನ್ಸ್ ಮಾಡಿದ್ದಕ್ಕೆ ಸೇರಿದಂತೆ ವಿವಿಧ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿದ್ದು, ಇದೀಗ ಕಡಿಮೆ ಬೆಲೆಯ ಲೆಹೆಂಗಾ (Lehenga) ಹಾಗೂ ನಕಲಿ ಚಿನ್ನಾಭರಣಗಳನ್ನು ತರಲಾಗಿದೆ ಎಂದು ಆರೋಪಿಸಿ ಮದುವೆ ಕ್ಯಾನ್ಸಲ್​ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಹರಿಯಾಣದ ಪಾಣಿಪತ್​ನಲ್ಲಿ ವಧುವಿಗೆ ಕಡಿಮೆ ಬೆಲೆಯ ಲೆಹೆಂಗಾ (Lehenga) ಹಾಗೂ ನಕಲಿ ಚಿನ್ನಾಭರಣಗಳನ್ನು ನೀಡಲಾಗಿದೆ ಎಂದು ಆರೋಪಿಸಿ ಮದುವೆಯನ್ನು ರದ್ದುಪಡಿಸಲಾಗಿದೆ. ವಧು ಹಾಗೂ ವರನ ಕಡೆಯವರು ಮದುವೆಮನೆಯಲ್ಲೇ ಕೈ ಕೈ ಮಿಲಾಯಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ವರನ ಸಹೋದರ, ಮೊದಲಿಗೆ ನಾವು ವಧುವಿನ ಕಡೆಯವರಿಗೆ ಹಣ ಕೊಟ್ಟು ಮದುವೆ ಮಂಟಪವನ್ನು ಬುಕ್ ಮಾಡುವಂತೆ ಹೇಳಿದ್ದೆವು. ಆ ಬಳಿಕ ಅವರು ದುಬಾರಿ ಮೌಲ್ಯದ ಲೆಹೆಂಗಾ (Lehenga) ಹಾಗೂ ಐದು ತರಹದ ಚಿನ್ನಾಭರಣಗಳನ್ನು ತಂದುಕೊಡುವಂತೆ ಬೇಡಿಕೆ ಇರಿಸಿದರು. ನಾವು ಈಗಷ್ಟೇ ಮನೆ ಕಟ್ಟಿದ್ದೇವೆ ಹೀಗಾಗಿ ನಮ್ಮ ಅನುಕೂಲಕ್ಕೆ ತಕ್ಕಂತಹ ಲೆಹೆಂಗಾ ಹಾಗೂ ಚಿನ್ನಾಭರಣಗಳನ್ನು ತಂದೆವು.

Marriage Ceremony

ನಾವು ಅಮೃತಸರದಿಂದ ಹೊರಟು ಮದುವೆ ಮಂಟಪ ತಲುಪಿದ ಬಳಿಕ ವಧುವಿನ ಕಡೆಯವರು ಇದು ಕಡಿಮೆ ಬೆಲೆಯ ಲೆಹೆಂಗಾ ಮತ್ತು ನಕಲಿ ಚಿನ್ನಾಭರಣ ಎಂದು ಆರೋಪಿಸಿ ಜಗಳವಾಡಲು ಶುರು ಮಾಡಿದರು. ಪದೇ ಪದೇ ಮದುವೆಯನ್ನು ಮುಂದೂಡುವಂತೆ ಒತ್ತಡ ಹೇರುತ್ತಿದ್ದರು. ತುಂಬಾ ಹಣ ಖರ್ಚಾದ ಮೇಲೆ ಜಗಳವಾಡಿ ಮದುವೆಯನ್ನು ರದ್ದುಪಡಿಸಿದ್ದಾರೆ ಎಂದು ವರನ ಸಹೋದರ ಆರೋಪಿಸಿದ್ದಾರೆ.

ವಧುವಿನ ಸಂಬಂಧಿಕರೊಬ್ಬರು ಮಾತನಾಡಿ, ವಧುವಿನ ತಂದೆ ಚಿಕ್ ವಯಸ್ಸಿನಲ್ಲೇ ತೀರಿಕೊಂಡಿದ್ದು, ವಧು ತನ್ನ ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾಳೆ. ಅಕ್ಟೋಬರ್ ತಿಂಗಳಲ್ಲಿ ಮದುವೆ ನಿಶ್ಚಯವಾದ ಬಳಿಕ ವರನ ಕಡೆಯವರು ಪದೇ ಪದೇ ದಿನಾಂಕವನ್ನು ಬದಲಾಯಿಸುವಂತೆ ಒತ್ತಡ ಹೇರಲು ಶುರು ಮಾಡಿದರು.

ಬಳಿಕ ವಧುವಿನ ತಾಯಿಯಿಂದ ಹಣ ಪಡೆದು ಕಡಿಮೆ ಬೆಲೆಯ ಲೆಹೆಂಗಾ (Lehenga) ಹಾಗೂ ನಕಲಿ ಚಿನ್ನಾಭರಣಗಳನ್ನು ತಂದು ಅಸಲಿ ಎಂದು ವಾದಿಸಲು ಶುರು ಮಾಡಿದರು. ಈ ಬಗ್ಗೆ ಪ್ರಶ್ನಿಸಿದಾಗ ವರನ ಕಡೆಯವರು ಜಗಳವಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ವಧುವಿನ ಕಡೆಯವರು ಆರೋಪಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಉಭಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯನ್ನು ರದ್ದುಪಡಿಸಲಾಗಿದ್ದು, ದೂರು ದಾಖಲಾಗಿದೆ. ವಿಚಾರದ ಮುಂದಿನ ನಿರ್ಣಯಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net