Champions Trophy ವೇಳಾಪಟ್ಟಿ ಹಿಂದಿದೆ ಈ ಪಿತೂರಿ; ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಹೊಸ ಖ್ಯಾತೆ ತೆಗೆದ ಪಾಕ್!​

Champions Trophy
Published on

ನವದೆಹಲಿ: 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡ ಭಾರತ ತಂಡ ಸೂಪರ್ ಸಂಡೇ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಡಿದಟ್ಟುವ ಮೂಲಕ ಹಾಲಿ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿತು. 8 ವರ್ಷದ ಕೆಳಗೆ ತಂಡದ ನಾಯಕರಾಗಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ (Virat Kohli) ಭಾನುವಾರ 51ನೇ ಏಕದಿನ ಶತಕ ಬಾರಿಸುವ ಮೂಲಕ ಭಾರತದ ಗೆಲುವಿನ ರೂವಾರಿಯಾದರು.

ಪಾಕಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (100*ರನ್, 111 ಎಸೆತ, 7 ಬೌಂಡರಿ) ತಮ್ಮ ಪಾರುಪತ್ಯವನ್ನು ಮುಂದುವರೆಸಿದ್ದಾರೆ. ಪಾಕಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಅನೇಕ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ಧಾರೆ ಎಂದರೆ ತಪ್ಪಾಗಲಾರದು. ಆದರೆ, ಪಾಕಿಸ್ತಾನದ ಸೋಲನ್ನು ಅರಗಿಸಿಕೊಳ್ಳಲಾರದೆ ಅಲ್ಲಿನ ಮಾಜಿ ಹಾಗೂ ಆಟಗಾರರು ಸರಣಿ ಹೇಳಿಕೆಗಳನ್ನು ನೀಡುತ್ತಿದ್ದು, ಮಾಜಿ ಆಟಗಾರ ರಮಿಜ್ ರಾಜಾ ವೇಳಾಪಟ್ಟಿಯ ಹಿಂದೆ ಷಡ್ಯಂತ್ರ ಅಡಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿರುವ ರಮಿಜ್ ರಾಜಾ, ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಏಕ ನ್ಯೂಜಿಲೆಂಡ್ ವಿರುದ್ಧ ಆಡಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರು ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಿದ್ದರೆ ತುಲನಾತ್ಮಕವಾಗಿ ಹೇಳಬೇಕೆಂದರೆ ಇದು ಸುಲಭದ ಮ್ಯಾಚ್ ಆಗಿತ್ತು.

Ramiz Raja

ಉದ್ಘಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಆಡಿ ಸೋಲುಂಡರು. ಇದು ಅವರ ಮೇಲೆ ಒತ್ತಡ ಹೇರಲು ಶುರುವಾಯಿತು. ಬಳಿಕ ಭಾರತದ ಮೇಲೆ ಆಡಿ ಸೋಲುಂಡರು. ಪಾಕಿಸ್ತಾನವು ಬಾಂಗ್ಲಾದೇಶ ಅಥವಾ ಭಾರತದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಏಕೆ ಆಡಲಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ನಾನು ಹೇಳಿದ ಹಾಗೆ ಹಾಗಿದ್ದರೆ ಒತ್ತಡವು ಸಮಾನವಾಗಿರುತ್ತದೆ. ವೇಳಾಪಟ್ಟಿ ಸಿದ್ಧ ಮಾಡಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಮಿಜ್ ರಾಜಾ ಆರೋಪಿಸಿದ್ಧಾರೆ.

ಆತಿಥೇಯರಿಗೆ ಭಾರೀ ಮುಖಭಂಗ 

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy) ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಭರವಸೆಯನ್ನು ಹುಸಿಗೊಳಿಸಿತು. ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಟೂರ್ನಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ಭಾರೀ ಮುಖಭಂಗವನ್ನುಂಟು ಮಾಡಿದೆ.

ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ತಂಡವೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ಗಿಂತ ಮೊದಲು ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net