

Saif Ali Khan: ಕಳೆದ ತಿಂಗಳು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚಾಕು ಇರಿತ ಘಟನೆ ಇಡೀ ಬಾಲಿವುಡ್ ಚಿತ್ರರಂಗವನ್ನೇ ಅಕ್ಷರಶಃ ಆತಂಕಕ್ಕೆ ದೂಡಿತ್ತು. ಒಬ್ಬ ಸ್ಟಾರ್ ನಟನ ಮೇಲೆ ಇಂತಹ ಭೀಕರ ಕೃತ್ಯಗಳು ನಡೆದರೆ, ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಪ್ರಶ್ನೆಗಳು ಮುಂಬೈ ನಗರದಲ್ಲಿ ವ್ಯಾಪಕವಾಗಿ ಕೇಳಿಬಂದಿತು. ಸೈಫ್ಗೆ ಚಾಕು ಇರಿದ ಘಟನೆ ಸಂಭವಿಸಿ ಇಂದಿಗೆ ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ಈ ಘಟನೆಯ ಬಗ್ಗೆ ಆಗಾಗ ಜನರು ಮಾತನಾಡುತ್ತಲೇ ಇದ್ದಾರೆ. ಅಸಲಿಗೆ ಇನ್ನೂ ಹಲವರಿಗೆ ಈ ಘಟನೆಯನ್ನು ನಂಬಲು ಆಗ್ತಿಲ್ಲ ಎಂಬುದೇ ಸದ್ಯ ಅಚ್ಚರಿಯ ಸಂಗತಿ.
ಇದಕ್ಕೆ ಕಾರಣ ಈ ಘಟನೆಯ ಬಳಿಕ ನಡೆದ ಕೆಲವು ಸಂಗತಿಗಳು. ಸ್ಟಾರ್ ನಟನೊಬ್ಬನ ಮನೆಗೆ ಭದ್ರತೆ ಒದಗಿಸಿದ್ದರೂ ಕೂಡ ಅಪರಿಚಿತನೊಬ್ಬ ನುಗ್ಗಿ ದಾಳಿ ಮಾಡಿದ್ದು ಅನೇಕ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ. ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸೈಫ್ ಅಲಿ ಖಾನ್ ನಡೆದುಕೊಂಡು ಬಂದ ರೀತಿಯು ಅನೇಕರಲ್ಲಿ ಹಲವು ರೀತಿಯ ಅನುಮಾಗಳನ್ನು ಹುಟ್ಟುಹಾಕಿತು. ಮನೆಯಲ್ಲಿ ಐಷಾರಾಮಿ ಕಾರುಗಳು ಇರುವಾಗ ಸಾಮಾನ್ಯ ಆಟೋ ರಿಕ್ಷಾದಲ್ಲಿ ಹೋಗಿದ್ದೇಕೆ ಎಂಬ ಪ್ರಶ್ನೆಯು ಮೂಡಿತು. ಒಂದೆಡೆ ಇದೆಲ್ಲವೂ ಸಿಂಪತಿಗಾಗಿ ಮಾಡಿದ ನಾಟಕವೇ? ಎಂಬ ಚರ್ಚೆಗಳು ತೀವ್ರವಾಯಿತು. ಸದ್ಯ ಇದೆಕ್ಕೆಲ್ಲ ಈಗ ತೆರೆಬಿದ್ದಿದ್ದು, ಸ್ವತಃ ಸೈಫ್ ಅಲಿ ಖಾನ್ ಅವರೇ ಸಂದರ್ಶನದಲ್ಲಿ ಇಂತಹ ಊಹಾಪೋಹಗಳಿಗೆ ಉತ್ತರಿಸಿದ್ದಾರೆ.
ಚಾಕು ಇರಿತ ಘಟನೆ ಬಳಿಕ ಎಲ್ಲಿಯೂ ಮಾತನಾಡದ ಸೈಫ್, ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಘಟನೆ ಕುರಿತಾದ ಹಲವು ವಿಷಯಗಳನ್ನು ಬಹಳ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ಮುಂಬೈ ಅಥವಾ ನೀವು ಇರುವ ಸ್ಥಳದಲ್ಲಿ ವಾಸಿಸುವುದು ನಿಮಗೆ ಈಗ ಅಸುರಕ್ಷಿತ ಅಂತ ಅನಿಸುತ್ತಿದೆಯೇ? ಘಟನೆ ಬಳಿಕ ಮುಂಬೈ ಬಿಟ್ಟು ಹೋಗಬೇಕು ಎಂದು ನಿರ್ಧರಿಸಿದ್ದು ಉಂಟಾ? ಎಂಬ ಪ್ರಶ್ನೆಗೆ ಸೈಫ್ ಕಡೆಗೂ ಪ್ರತಿಕ್ರಿಯಿಸಿದ್ದಾರೆ.
"ನಾನೆಂದಿಗೂ ಭದ್ರತೆಯಲ್ಲಿ ನಂಬಿಕೆ ಇಟ್ಟವನ್ನಲ್ಲ. ಜನರು, 'ಏಕೆ ಸೈಫ್ಗೆ ಹೆಚ್ಚಿನ ಭದ್ರತೆ ಇಲ್ಲ?' ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ನಾನೂ ಗಮನಿಸಿದೆ. ಆದರೆ, ನನಗೆ ಅದರ ಅವಶ್ಯಕತೆ ಇಲ್ಲ. ಇದೊಂದು ದುಃಸ್ವಪ್ನ ಎಂದೇ ನಾನು ಭಾವಿಸುವೆ. ಅಸಲಿಗೆ ಇದು ಪಿತೂರಿ ಅಥವಾ ಉದ್ದೇಶ ಪೂರ್ವಕ ದಾಳಿ ಎಂದು ನಾನು ನೋಡಲ್ಲ. ಇಲ್ಲಿಯವರೆಗೆ ನನಗೆ ಅಂತಹ ಯಾವುದೇ ಬೆದರಿಕೆ ಇಲ್ಲ. ನಮ್ಮಲ್ಲಿ ಯಾರಿಗೂ ಯಾವುದೇ ರೀತಿಯ ಬೆದರಿಕೆಗಳು ಇಲ್ಲ. ಒಬ್ಬ ವ್ಯಕ್ತಿ ಡ್ರೈನ್ ಪೈಪ್ ಅನ್ನು ಹತ್ತಿ, ರಂಧ್ರದ ಮೂಲಕ ನಮ್ಮ ಮನೆಗೆ ನುಸುಳಿ ಬಂದಿದ್ದಾನೆ ಎಂಬುದು ಸ್ಪಷ್ಟ. ಇದನ್ನು ನಾನು ದೃಢವಾಗಿ ನಂಬುತ್ತೇನೆ" ಎಂದರು.
"ಯಾರ ಮನೆಗೆ ಬಂದಿದ್ದೇನೆ ಎಂಬುದು ತಿಳಿದಿರಲಿಲ್ಲ. ಇದು ಒಳಗಿನವರ ಕೆಲಸವಲ್ಲ. ಈ ವಿಷಯದಲ್ಲಿ ಪೊಲೀಸರು ಅದ್ಭುತ ಕೆಲಸ ಮಾಡಿದ್ದಾರೆ. ಮುಂಬೈ ನನಗೆ ತುಂಬಾ ಸುರಕ್ಷಿತ ಎಂಬ ಭಾವನೆಯಿದೆ. ಇದು ಸಂಪೂರ್ಣವಾಗಿ ಸುರಕ್ಷಿತ ನಗರವೇ. ಜಗತ್ತಿನ ಇತರ ಸ್ಥಳಗಳಾದ ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಯಾವುದೇ ಆಗಿರಲಿ, ನಿಮ್ಮ ಮನೆಯ ಬಾಗಿಲುಗಳನ್ನು ಮತ್ತು ಕಿಟಕಿಗಳನ್ನು ಭದ್ರವಾಗಿ ಲಾಕ್ ಮಾಡಿಕೊಳ್ಳದಿದ್ದರೆ ಇಂತಹ ಘಟನೆಗಳು ನಡೆದೇ ನಡೆಯುತ್ತವೆ. ನನ್ನ ಪ್ರಕಾರ, ಇದು ಉದ್ದೇಶ ಪೂರ್ವಕ ಕೆಲಸವಲ್ಲ. ಇವರು ಹಣದ ಹತಾಶೆಗೆ ಒಳಗಾಗಿ, ಏನಾದರೂ ಕದ್ದು ಪರಾರಿಯಾಗುವ ಮನಸ್ಥಿತಿ ಇದ್ದಂತಹ ವ್ಯಕ್ತಿ" ಎಂದು ಸೈಫ್ ಹೇಳಿದ್ದಾರೆ,(ಏಜೆನ್ಸೀಸ್).