

ಬೆಂಗಳೂರು: ಹೊಂಬಾಳೆ ಫಿಲಂಸ್ ಸಂಸ್ಥೆಯು ಬುಧವಾರ ಹೊಸ ಚಿತ್ರವೊಂದನ್ನು ಘೋಷಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಆದರೆ, ಆ ಚಿತ್ರದಲ್ಲಿ ಯಾರು ನಟಿಸಬಹುದು, ಯಾರು ನಿರ್ದೇಶನ ಮಾಡಬಹುದು, ಹೆಸರೇನಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಈ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಾರಾ ಮತ್ತು ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರಾ ಎಂಬ ಪ್ರಶ್ನೆಯೊಂದು ಕೇಳಿಬರುತ್ತಿದೆ. ಎಲ್ಲ ಬಿಟ್ಟು ಈ ತರಹದ್ದೊಂದು ಸುದ್ದಿ ಹರಡುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆ ಬರುವುದು ಸಹಜ.
'ಕೆಜಿಎಫ್ 2' ಚಿತ್ರದ ಚಿತ್ರೀಕರಣಕ್ಕಾಗಿ ಪ್ರಶಾಂತ್ ನೀಲ್ ಇದೀಗ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದಾರೆ. ಈ ಮಧ್ಯೆ, ಕೆಲವು ದಿನಗಳ ಹಿಂದೆ ಅವರು ಪ್ರಭಾಸ್ ಅವರನ್ನು ಭೇಟಿ ಮಾಡಿರುವ ಸುದ್ದಿ ಕೇಳಿಬಂದಿತ್ತು. ಆ ಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ಸೇರಿಕೊಂಡಿದೆ. ಅದಕ್ಕೆ ಸರಿಯಾಗಿ, ಹೊಂಬಾಳೆ ಫಿಲಂಸ್ ಸಂಸ್ಥೆಯು ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರ ಮಾಡುವುದಾಗಿ ಹೇಳಿದೆ.
ಹಾಗಾಗಿ, ಹೊಂಬಾಳೆ ಫಿಲಂಸ್ನವರು ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಭಾಸ್ ನಟಿಸುವ ಸಾಧ್ಯತೆ ಇದೆ ಮತ್ತು ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಷಯವಾಗಿ ಚಿತ್ರತಂಡದವರು ಯಾವೊಂದು ಸುದ್ದಿಯನ್ನೂ ಹೊರಬಿಟ್ಟಿಲ್ಲ. ಅದಕ್ಕಾಗಿ ಬುಧವಾರದವರೆಗೂ ಕಾಯದೇ ವಿಧಿಯಿಲ್ಲ.