ಸಿಡ್ನಿಯಲ್ಲಿ ಕಾಡಿದ ಮಳೆ, ಆಸೀಸ್ ಎಚ್ಚರಿಕೆಯ ಬ್ಯಾಟಿಂಗ್

cricket web
Published on

ಸಿಡ್ನಿ: ವರ್ಷ ಬದಲಾದಂತೆ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಚಹರೆಯೂ ಬದಲಾಗಿದ್ದು, ಭಾರತ ತಂಡ ಆಡುತ್ತಿರುವ 2021ರ ಮೊದಲ ಪಂದ್ಯದಲ್ಲಿ ಆತಿಥೇಯರಿಂದ ದಿಟ್ಟ ಪ್ರತಿರೋಧ ಎದುರಿಸಿದೆ. ಅನುಭವಿ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಕೊನೆಗೂ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಲಕ್ಷಣ ತೋರುವುದರೊಂದರಿಗೆ ಬಾರ್ಡರ್-ಗಾವಸ್ಕರ್ ಟ್ರೋಫಿಯ ಮಳೆ ಬಾಧಿತ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡ ಭಾರತಕ್ಕೆ ಸವಾಲಾಗಿ ನಿಲ್ಲುವತ್ತ ಮುನ್ನಡೆದಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಆಸೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಳಿಕ ಮಳೆ ಅಡಚಣೆ ಎದುರಾಯಿತು. ದಿನದಾಟದಲ್ಲಿ ನಡೆದ ಒಟ್ಟಾರೆ 55 ಓವರ್‌ಗಳ ಆಟದಲ್ಲಿ ಆಸೀಸ್ 2 ವಿಕೆಟ್‌ಗೆ 166 ರನ್ ಗಳಿಸಿದ್ದು, ಉತ್ತಮ ಮೊತ್ತದತ್ತ ದೃಷ್ಟಿ ನೆಟ್ಟಿದೆ. ಮೊದಲ ಟೆಸ್ಟ್ ಆಡುತ್ತಿರುವ ಆರಂಭಿಕ ವಿಲ್ ಪುಕೊವ್‌ಸ್ಕಿ (62 ರನ್, 110 ಎಸೆತ, 4 ಬೌಂಡರಿ) ಮತ್ತು ಕೊನೆಗೂ ಉತ್ತಮ ಆರಂಭವನ್ನು ಅರ್ಧಶತಕವಾಗಿ ಪರಿವರ್ತಿಸುವಲ್ಲಿ ಸಲವಾಗಿರುವ ಯುವ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ (67*ರನ್, 149 ಎಸೆತ, 8 ಬೌಂಡರಿ) ಸಾಹಸದಿಂದ ಆಸೀಸ್ ಸರಣಿಯಲ್ಲಿ ಮೊದಲ ಬಾರಿಗೆ ದಿಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿದೆ.

ವಾರ್ನರ್‌ಗೆ ಸಿರಾಜ್ ಬ್ರೇಕ್

ಭಾರತ ವರ್ಷದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಸಫಲವಾಗಿತ್ತು. ವೇಗಿ ಮೊಹಮದ್ ಸಿರಾಜ್ ದಿನದ 4ನೇ ಓವರ್‌ನಲ್ಲೇ ಡೇವಿಡ್ ವಾರ್ನರ್ (5) ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಸಿರಾಜ್ ಎಸೆತದಲ್ಲಿ ವಾರ್ನರ್ ಮೊದಲ ಸ್ಲಿಪ್‌ನಲ್ಲಿದ್ದ ಚೇತೇಶ್ವರ ಪೂಜಾರಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಪುಕೊವ್‌ಸ್ಕಿ, ಲಬುಶೇನ್ ಅರ್ಧಶತಕ

ಡೇವಿಡ್ ವಾರ್ನರ್ ಪುನರಾಗಮನದ ಬಳಿಕ ಸಹಜವಾಗಿಯೇ ಆಸೀಸ್ ಬ್ಯಾಟಿಂಗ್ ವಿಭಾಗ ಬಲ ಪಡೆದುಕೊಳ್ಳುವ ನಿರೀಕ್ಷೆ ಇಡಲಾಗಿತ್ತು. ವಾರ್ನರ್ ವಿಫಲರಾದರೂ, ಯುವ ಬ್ಯಾಟ್ಸ್‌ಮನ್‌ಗಳಾದ ವಿಲ್ ಪುಕೊವ್‌ಸ್ಕಿ ಮತ್ತು ಮಾರ್ನಸ್ ಲಬುಶೇನ್ ಆಸೀಸ್ ಬ್ಯಾಟಿಂಗ್ ವಿಭಾಗ ಪುಟಿದೇಳುವ ನಿರೀಕ್ಷೆ ನಿಜವಾಗಿಸಿದರು. ಇವರಿಬ್ಬರು 2ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ಭಾರತೀಯ ಬೌಲರ್‌ಗಳಿಗೆ ಸವಾಲಾದರು. ಚಹಾ ವಿರಾಮದ ಬಳಿಕ ಕೊನೆಗೂ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಭಾರತ ಯಶಸ್ವಿಯಾಯಿತು. ಚೊಚ್ಚಲ ಟೆಸ್ಟ್ ಆಡುತ್ತಿರುವ ವೇಗಿ ನವದೀಪ್ ಸೈನಿ, ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿದ ವಿಲ್ ಪುಕೊವ್‌ಸ್ಕಿ ಶತಕದ ಆಸೆಗೆ ತಣ್ಣೀರೆರಚಿ ಚೊಚ್ಚಲ ವಿಕೆಟ್ ಸಂಪಾದಿಸಿದರು.

ಲಯ ಕಂಡುಕೊಂಡ ಸ್ಟೀವನ್ ಸ್ಮಿತ್

ಸರಣಿಯ ಹಿಂದಿನ 4 ಇನಿಂಗ್ಸ್‌ಗಳಲ್ಲಿ ಒಂದಂಕಿ ದಾಟಿರದ ಸ್ಟೀವನ್ ಸ್ಮಿತ್ ಸಿಡ್ನಿ ಮೈದಾನದಲ್ಲಿ ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ನಿಂತಿದ್ದಾರೆ. ದಿನದಾಟದಲ್ಲಿ ಎದುರಿಸಿದ 64 ಎಸೆತಗಳನ್ನು ದಿಟ್ಟವಾಗಿ ಎದುರಿಸಿ ನಿಂತು 5 ಬೌಂಡರಿ ಸಹಿತ 31 ರನ್ ಗಳಿಸಿ, ಲಬುಶೇನ್ ಜತೆಗೆ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಸ್ಮಿತ್, ಇನ್ನಷ್ಟು ಅಪಾಯಕಾರಿಯಾಗುವ ಲಕ್ಷಣ ತೋರಿದ್ದಾರೆ. ಮೊದಲೆರಡು ಟೆಸ್ಟ್‌ಗಳಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಸಾರಥ್ಯದ ಬೌಲಿಂಗ್ ಪಡೆಯ ದಾಳಿಗೆ ಕಂಗೆಟ್ಟಿದ್ದ ಸ್ಮಿತ್, ಈ ಬಾರಿ ತಿರುಗೇಟು ನೀಡಿದ್ದಾರೆ. ಲಬುಶೇನ್ ಜತೆಗೆ ಮುರಿಯದ 3ನೇ ವಿಕೆಟ್‌ಗೆ 20.4 ಓವರ್‌ಗಳಲ್ಲಿ 60 ರನ್ ಸೇರಿಸಿರುವ ಸ್ಮಿತ್, ಅಶ್ವಿನ್ ದಾಳಿಗೂ ಸವಾಲೊಡ್ಡಿ ನಿಂತಿದ್ದಾರೆ. ಅಶ್ವಿನ್‌ರನ್ನು ಆಕ್ರಮಣಕಾರಿಯೇ ಎದುರಿಸುವ ತಂತ್ರದ ಮೂಲಕ ಸ್ಮಿತ್ ಮುನ್ನುಗ್ಗಿ ಬಂದು ಬೌಂಡರಿಗಳನ್ನೂ ಬಾರಿಸಿದರು.

4 ಗಂಟೆ ಕಾಲ ಮಳೆ ಅಡಚಣೆ

ಮಳೆಯಿಂದಾಗಿ ಮೊದಲ ದಿನದಾಟದಲ್ಲಿ 35 ಓವರ್ ಆಟ ನಷ್ಟಗೊಂಡಿತು. ಬೆಳಗ್ಗೆ 7.1 ಓವರ್ ಆಟದ ಬಳಿಕ ಸುಮಾರು 4 ಗಂಟೆಗಳ ಕಾಲ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತ್ತು. ಭಾರಿ ಮಳೆಯ ಬಳಿಕ ಸೂಪರ್-ಸಾಪರ್ ಬಳಿಕ ಎಸ್‌ಸಿಜಿ ಗ್ರೌಂಡ್ಸ್‌ಮನ್‌ಗಳು ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸಲು ಶ್ರಮಿಸಿದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆಟ ಪುನರಾರಂಭಗೊಂಡಿತು. ದಿನದಂತ್ಯದಲ್ಲಿ 30 ನಿಮಿಷ ಹೆಚ್ಚುವರಿ ಆಟ ಆಡಲಾಯಿತು.

ಪಂತ್ ಕ್ಯಾಚ್ ಡ್ರಾಪ್

ಆಸೀಸ್ ಮೇಲೆ ಮೇಲುಗೈ ಸಾಧಿಸುವ ಭಾರತದ ಅವಕಾಶಗಳಿಗೆ ವಿಕೆಟ್ ಕೀಪರ್ ರಿಷಭ್ ಪಂತ್ ಅಡ್ಡಿಯಾದರು. ಪುಕೊವ್‌ಸ್ಕಿ ಅವರ 2 ಕ್ಯಾಚ್‌ಗಳನ್ನು ಕೈಚೆಲ್ಲಿದ ಪಂತ್, ಅರ್ಧಶತಕ ಪೂರೈಸಲು ಅವಕಾಶ ಮಾಡಿಕೊಟ್ಟರು. ಮೊದಲಿಗೆ ಅಶ್ವಿನ್ ಎಸೆತದಲ್ಲಿ ಎಡ್ಜ್ ಆದ ಚೆಂಡನ್ನು ಕೈಚೆಲ್ಲಿದ ಪಂತ್, ಬಳಿಕ ಸಿರಾಜ್ ಎಸೆತದಲ್ಲಿ ಗ್ಲೌಸ್ ತಾಗಿ ಬಂದ ಚೆಂಡನ್ನೂ ಹಿಡಿಯಲಿಲ್ಲ.

ಆಸ್ಟ್ರೇಲಿಯಾ: 55 ಓವರ್‌ಗಳಲ್ಲಿ 2 ವಿಕೆಟ್‌ಗೆ 166 (ಪುಕೊವ್‌ಸ್ಕಿ 62, ವಾರ್ನರ್ 5, ಲಬುಶೇನ್ 67*, ಸ್ಟೀವನ್ ಸ್ಮಿತ್ 31*, ಸಿರಾಜ್ 46ಕ್ಕೆ 1, ಸೈನಿ 32ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net