

ಬ್ಯಾಂಕಾಕ್: ಕರೊನಾ ವೈರಸ್ ಭೀತಿಯಿಂದಾಗಿ ಕಳೆದ 10 ತಿಂಗಳಿಂದ ನಿಂತ ನೀರಾಗಿದ್ದ ಬ್ಯಾಡ್ಮಿಂಟನ್ ಚಟುವಟಿಕೆ ಹಂತ ಹಂತವಾಗಿ ಆರಂಭಗೊಳ್ಳುತ್ತಿದೆ. ಮುಂದಿನ ವಾರ ಥಾಯ್ಲೆಂಡ್ ಓಪನ್ ಆಡಲು ಭಾರತದ ಷಟ್ಲರ್‌ಗಳು ಈಗಾಗಲೇ ಬ್ಯಾಂಕಾಕ್ ತಲುಪಿದ್ದಾರೆ. ಸೈನಾ ನೆಹ್ವಾಲ್, ಪಿವಿ ಸಿಂಧು ಸೇರಿದಂತೆ ವಿಶ್ವದ ಸ್ಟಾರ್ ಷ್ಲಟರ್‌ಗಳು ಕೂಡ ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕೋವಿಡ್-19 ಶಿಷ್ಟಾಚಾರಕ್ಕೆ ಕುರಿತಂತೆ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ಕೆಲವೊಂದು ಮಾರ್ಗಸೂಚಿಗಳನ್ನು ಸಿದ್ಧಮಾಡಿಕೊಂಡಿದೆ. ಆದರೆ, ಕೆಲವೊಂದು ಮಾರ್ಗಸೂಚಿಗಳ ಬಗ್ಗೆ ಷಟ್ಲರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಸೈನಾ ನೆಹ್ವಾಲ್ ಮಾತ್ರ ಬಹಿರಂಗವಾಗಿಯೇ ಬಿಡಬ್ಲ್ಯುಎಫ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕೋವಿಡ್-19 ಶಿಷ್ಟಾಚಾರ ಹಾಗೂ ಬಯೋ ಸುರಕ್ಷತಾ ನಿಯಮಗಳು ಆಟಗಾರರಿಗೆ ಕಿರಿಕಿರಿ ಉಂಟಾಗಿದ್ದು, ತರಬೇತುದಾರರು, ಫಿಸಿಯೋ ಅವರುಗಳನ್ನು ಕೋರ್ಟ್ ಬಳಿ ಬಿಡದಿರುವುದಕ್ಕೆ ಸೈನಾ ನೆಹ್ವಾಲ್ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಟೂರ್ನಿ ಪೂರ್ತಿ ಆಟಗಾರರು, ಫಿಸಿಯೋ ಹಾಗೂ ತರಬೇತುದಾರರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅಭ್ಯಾಸಕ್ಕೆ ಕೇವಲ ಒಂದು ಮಾತ್ರ ನಿಗದಿಪಡಿಸಲಾಗಿದೆ. ಹೀಗಾದರೆ ಟೂರ್ನಿಯಲ್ಲಿ ಆಡಲು ಸಾಧ್ಯವೆ. ಉತ್ತಮ ವಾತಾವರಣದಲ್ಲಿ ಟೂರ್ನಿ ಆಡಲು ಬಯಸುತ್ತೇವೆ. ದಯಮಾಡಿ ಪರಿಹಾರ ಕೊಡಿ ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ಆದರೆ, ಸೈನಾ ಟ್ವೀಟ್ ಗಳಿಗೆ ಬಿಡಬ್ಲ್ಯುಎಫ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ಶ್ರೀಲಂಕಾ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ಸರಣಿ ಜಯ
ಮಾರ್ಚ್ ತಿಂಗಳೊಳಗೆ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಇಂಥ ಕಠಿಣ ನಿಯಮ ಸಲ್ಲದು ಎಂದು ಸೈನಾ ಹೇಳಿದ್ದಾರೆ. ಭಾರತದ ಪರ ಪಿವಿ ಸಿಂಧು, ಸಿಕ್ಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ, ಸಾತ್ವಿಕ್ ಸಾಯಿರಾಜ್ ರೆಡ್ಡಿ-ಚಿರಾಗ್ ಶೆಟ್ಟಿ, ಕೆ.ಶ್ರೀಕಾಂತ್, ಸಾಯಿ ಪ್ರಣೀತ್, ಪಿ.ಕಶ್ಯಪ್ ಹಾಗೂ ಸುಮಿತ್ ರೆಡ್ಡಿ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.