

ಪುತ್ತೂರು ಗ್ರಾಮಾಂತರ: ಕೊಳ್ತಿಗೆ ಗ್ರಾಮದ ಕಂಟ್ರಮಜಲು ಸೇರಿದಂತೆ ಈ ಭಾಗದ ವಿವಿಧೆಡೆಯ ಕೃಷಿ ಪ್ರದೇಶಗಳಿಗೆ ಕಾಡಾನೆ ಬುಧವಾರ ರಾತ್ರಿ ಲಗ್ಗೆಯಿಟ್ಟು ಅಪಾರ ಕೃಷಿ ಹಾನಿ ಮಾಡಿದೆ.
ಕಂಟ್ರಮಜಲು ಅಶೋಕ್ ರೈ ಕಷಿ ತೋಟಕ್ಕೆ ಬುಧವಾರ ರಾತ್ರಿ ವೇಳೆ ಕಾಲಿಟ್ಟಿದ್ದ ಕಾಡಾನೆ ತೆಂಗಿನ ಗಿಡ, ಫಸಲು ನೀಡುವ ತೆಂಗಿನ ಮರ, ಅಡಕೆ, ಬಾಳೆಗಿಡಗಳನ್ನು ಹಾನಿಗೊಳಿಸಿ ಅಪಾರ ಪ್ರಮಾಣದ ಕೃಷಿ ನಾಶ ಮಾಡಿದೆ. ಪೂಂದ್ರುಕೋಡಿ ಮತ್ತು ಬಿಡಾರ ವ್ಯಾಪ್ತಿಯ ಹಲವು ಮಂದಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ. ಕಂಟ್ರಮಜಲು ಪರಿಸರಕ್ಕೆ 6 ತಿಂಗಳ ಬಳಿಕ ಕಾಡಾನೆ ಲಗ್ಗೆಯಿಟ್ಟಿದ್ದು, ಮತ್ತೆ ಈ ಭಾಗದ ಜನತೆ ಆತಂಕಿತರಾಗಿದ್ದಾರೆ.
ಸೋಲಾರ್ ಬೇಲಿ ದುರಸ್ತಿ: ಪೆರ್ನಾಜೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಗಾಗಿ ಅರಣ್ಯ ಇಲಾಖೆಯಿಂದ ರಕ್ಷಿತಾರಣ್ಯದ ಬದಿಯಲ್ಲಿ ನಿರ್ಮಿಸಲಾಗಿದ್ದ ಸೋಲಾರ್ ಬೇಲಿಗೆ ಇತ್ತೀಚೆಗೆ ಮರಗಳು ಉರುಳಿಬಿದ್ದು, ಹಾನಿಗೊಂಡಿತ್ತು. ಇದೀಗ ಈ ಭಾಗದಲ್ಲಿ ಕಾಡಾನೆ ಉಪಟಳ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿಯ ದುರಸ್ತಿ ಕಾರ್ಯ ಗುರುವಾರ ಆರಂಭಗೊಂಡಿದೆ.