

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಪಡೆದ ಸಂಸ್ಥೆಯಾಗಿ ರಾರಾಜಿಸುತ್ತಿದ್ದು, ಅವೆಲ್ಲದ್ದಕ್ಕೂ ಸಂಸ್ಥಾಪಕರ ದೂರದೃಷ್ಟಿ ಹಾಗೂ ತ್ಯಾಗದ ಫಲ ಕಾರಣ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು.
ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಹಾಸ್ಪಿಟಲ್ ಮತ್ತು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ಬುಧವಾರ ಯೋಜಿಸಲಾದ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದರು.
ನಿಟ್ಟೆ ಎನ್ನುವ ಗ್ರಾಮೀಣ ಭಾಗದಿಂದ ಆರಂಭಿಸಿದ ಶಾಲೆ, ಶಿಕ್ಷಣ ಮತ್ತು ಆರೋಗ್ಯ ಬಗೆಗಿನ ಕಾಳಜಿಯಿಂದಾಗಿ ನಿಟ್ಟೆ, ಮಂಗಳೂರು, ಬೆಂಗಳೂರು, ದೇರಳಕಟ್ಟೆಯಲ್ಲೂ ಕ್ಯಾಂಪಸ್ ಹೊಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಶಿಕ್ಷಣದೊಂದಿಗೆ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುತ್ತಾ ಸಂಶೋಧನೆಯಲ್ಲೂ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಕೃಷ್ಣ ಕುಮಾರ್ ಪೂಂಜ ಮಾತನಾಡಿ, ಹಳ್ಳಿಯಿಂದ ಪ್ರಗತಿ, ಹಳ್ಳಿಯಲ್ಲೂ ಶಿಕ್ಷಣ, ಆರೋಗ್ಯ ಲಭಿಸುವಂತಾಗಬೇಕೆನ್ನುವ ಉದ್ದೇಶದೊಂದಿಗೆ ನಿಟ್ಟೆ ಸಂಸ್ಥೆ ಆರಂಭಿಸಿದ್ದ ಸಂಸ್ಥಾಪಕರ ಗುರಿ ಈಡೇರಿದೆ. ಪ್ರಸ್ತುತ ಸುಮಾರು 21 ಹಳ್ಳಿಗಳಲ್ಲಿ ಆರೋಗ್ಯ ಕೇಂದ್ರದ ಮೂಲಕ ಜನರಿಗೆ ಉಚಿತ ಸೇವೆ ನೀಡಿ ಕಾರ್ಯಾಚರಿಸುತ್ತಿರುವ ನಿಟ್ಟೆ ಸಂಸ್ಥೆ ಆರೋಗ್ಯ ಕುರಿತಾಗಿ ಅದೆಷ್ಟು ಕಾಳಜಿ ವಹಿಸಿದೆ ಎಂಬುದಕ್ಕೆ ಸಾಕ್ಷಿ ಎಂದರು.
ನಿಟ್ಟೆ ವಿವಿಯ ಶೈಕ್ಷಣಿಕ ಸಹಕುಲಾಧಿಪತಿ ಪ್ರೊ.ಎಂ.ಶಾಂತಾರಾಮ್ ಶೆಟ್ಟಿ, ಆಡಳಿತ ಸಹ ಕುಲಾಧಿಪತಿ ಎನ್.ವಿಶಾಲ್ ಹೆಗ್ಡೆ, ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಹರ್ಷ ಹಾಲಹಳ್ಳಿ ಹಾಗೂ ಡಾ.ವೀಣಾ ಉಪಸ್ಥಿತರಿದ್ದರು. ಡಾ.ಸುಮಲತಾ ಸ್ವಾಗತಿಸಿದರು. ಡಾ.ಸುಕನ್ಯಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ.ಶಿರಾಲ್ ಹೆಗ್ಡೆ ವಂದಿಸಿದರು. ಸುಮಿತ್ ಚೌಟ ಕಾರ್ಯಕ್ರಮ ನಿರೂಪಿಸಿದರು.