

ಬೆಳ್ತಂಗಡಿ: ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ಮಂಗಳವಾರ ಮುಂಜಾನೆ ದಾಳಿ ಇಟ್ಟು ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೈದಿದೆ.
ಚಾರ್ವಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟಿದ್ದು, ಕೃಷಿಕ ಅನಂತ ರಾವ್ ಅವರ ತೋಟದಲ್ಲಿ 120ಕ್ಕಿಂತ ಅಧಿಕ ಅಡಕೆ ಮರಗಳನ್ನು ಮುರಿದು ಹಾಕಿದೆ. ಮುಂಜಾನೆ ಹೊತ್ತಿಗೆ ರಸ್ತೆಯಿಂದಲೇ ಸಂಚರಿಸಿ ಬಂದ ಕಾಡಾನೆಗಳು ಸೋಲಾರ್ ಬೇಲಿ ಇಲ್ಲದ ಕಡೆಯ ಸಣ್ಣ ಸ್ಥಳದ ಮೂಲಕ ತೋಟಕ್ಕೆ ನುಗ್ಗಿರುವುದು ಬೆಳಗ್ಗೆ 6ರ ಸುಮಾರಿಗೆ ಮನೆಯವರಿಗೆ ತಿಳಿದು ಬಂದಿದ್ದು, ಈ ವೇಳೆ ಕಾಡಾನೆಗಳು ತೋಟದಲ್ಲಿ ಸಂಚಾರ ನಡೆಸುತ್ತಿದ್ದವು. ತಕ್ಷಣ ಸೋಲಾರ್ ಬೇಲಿಯ ಸಂಪರ್ಕ ತಪ್ಪಿಸಿ ಆನೆಗಳನ್ನು ತೋಟದಿಂದ ಓಡಿಸಲಾಗಿದ್ದು, ಈ ವೇಳೆ 5 ದೊಡ್ಡ ಆನೆಗಳು ಹಾಗೂ 1 ಮರಿಯಾನೆ ಕಂಡುಬಂದಿವೆ. ಆನೆಗಳು ತೋಟದಿಂದ ಹೊರ ಹೋಗುವ ವೇಳೆ ಸೋಲಾರ್ ಬೇಲಿಯ 5 ಕಂಬಗಳಿಗೆ ಹಾನಿ ಉಂಟು ಮಾಡಿವೆ ಎಂದು ತೋಟದ ಮಾಲೀಕರ ಪುತ್ರ ಪ್ರಕಾಶ ನಾರಾಯಣ ರಾವ್ ತಿಳಿಸಿದ್ದಾರೆ.
ಸ್ಥಳಕ್ಕೆ ಡಿಆರ್ಎಫ್ಒ ರಂಜಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಠದ ಮಜಲು ಪರಿಸರದಲ್ಲಿ ಆಗಾಗ ಕಾಡಾನೆ ದಾಳಿ ಮಾಡುತ್ತಿದ್ದು, ಇಲ್ಲಿನ ಕೃಷಿಕರಿಗೆ ಭಾರಿ ಪ್ರಮಾಣದ ಕೃಷಿ ನಷ್ಟ ಉಂಟಾಗುತ್ತಿದೆ. ಸಾಮಾನ್ಯವಾಗಿ ಇಲ್ಲಿ ಒಂಟಿ ಸಲಗ ಅಥವಾ ಎರಡರಿಂದ ಮೂರು ಆನೆಗಳು ದಾಳಿ ವಾಡುತ್ತಿದ್ದು, ಈ ಬಾರಿ 6 ಆನೆಗಳ ಹಿಂಡು ತೋಟಕ್ಕೆ ನುಗ್ಗಿದೆ.