ಪತ್ನಿಯ ಎದುರಲ್ಲೇ ಪ್ರೇಯಸಿ ಜತೆ ಪತಿಯ ತುಂಟಾಟ; ಇಬ್ಬರು ಮಹಿಳೆಯರ ಪ್ಲ್ಯಾನ್​ಗೆ ​​ಸುಟ್ಟು ಕರಕಲಾದ Engineer

Crime Scene
Published on

ಲಖನೌ: ಪತ್ನಿಯ ಎದುರೇ ಪ್ರೇಯಸಿ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರಪ್ರದೇಶದ ಇಟಾವಾದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರಾಘವೇಂದ್ರ ಯಾದವ್​ (47) ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಪೊಲೀಸರು ರಾಘವೇಂದ್ರರ ಪತ್ನಿ ಕಿರಣ್ ಯಾದವ್​ನನ್ನು (35) ಬಂಧಿಸಿದ್ದು, ಪ್ರೇಯಸಿ ವರ್ಷಾ ಯಾದವ್​ (28) ತಲೆಮಾರಿಸಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಎಸ್​ಎಸ್​ಪಿ ಸಂಜಯ್​ ವರ್ಮಾ, ದೆಹಲಿಯ ಕಂಪನಿ ಒಂದರಲ್ಲಿ ಇಂಜಿನಿಯರ್​ (Engineer) ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಯಾದವ್​ಗೆ ಮದುವೆಯಾಗಿ ಓರ್ವ ಮಗನಿದ್ದು, ವರ್ಷಾ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯ ಜೊತೆಗಿದ್ದ ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ತನ್ನ ಪ್ರೇಯಸಿಗೆ ಬ್ಲಾಕ್​ಮೇಲ್​ ಮಾಡುತ್ತಿದ್ದ. ಇದಲ್ಲದೆ ಪತ್ನಿಯ ಮೇಲೆ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದ. ಇದರಿಂದಾಗಿ ನೊಂದಿದ್ದ ಕಿರಣ್​ ಆತನ ಪ್ರೇಯಸಿ ವರ್ಷಾ ಜೊತೆಗೆ ಕೈ ಜೋಡಿಸಿ ರಾಘವೇಂದ್ರನ ಕೊಲೆ ಮಾಡಿದ್ದಾರೆ.

ವಿಚಾರಣೆಯ ವೇಳೆ ಮೃತನ ಪತ್ನಿ ಕಿರಣ್​ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ನಡೆದ ದಿನ ರಾತ್ರಿ ರಾಘವೇಂದ್ರ ಪತ್ನಿ ಹಾಗೂ ಪ್ರೇಯಸಿ ಇಬ್ಬರನ್ನು ಕಾರ್ಯಕ್ರಮ ಒಂದಕ್ಕೆ ಕರದುಕೊಂಡು ಹೋಗಿದ್ದ. ಮನೆಗೆ ವಾಪಸ್​ ಬಂದ ಬಳಿಕ ಪ್ರೇಯಸಿಯೊಂದಿಗೆ ರೂಮಿನಲ್ಲಿದ್ದ. ಈ ವೇಳೆ ಪತ್ನಿ ರಾಘವೇಂದ್ರ ತಿನ್ನುವ ಆಹಾರದಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ನೀಡಿದ್ದು, ಆತ ಊಟ ಸೇವಿಸಿದ ಬಳಿಕ ಪ್ರೇಯಸಿಯೊಂದಿಗೆ ಏಕಾಂತದಲ್ಲಿರುವಾಗ ಕಿರಣ್​ ದಾಳಿ ಮಾಡಿದ್ದು, ಆಕೆಗೆ ವರ್ಷಾ ಸಾಥ್​ ನೀಡಿದ್ದಾಳೆ. ಬಳಿಕ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದು, ಹಾಸಿಗೆ ಮೇಲೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಆರಂಭದಲ್ಲಿ ಇದು ಶಾರ್ಟ್​ ಸರ್ಕ್ಯೂಟ್​ ಎಂದು ಭಾವಿಸಿದ್ದೆವು. ಆದರೆ, ಮೃತನ ಮಗ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಇದು ಕೊಲೆ ಎಂದು ಸಾಬೀತಾಗಿದ್ದು, ಕಿರಣ್​ ಹಾಗೂ ವರ್ಷಾ ಪಾತ್ರವಿರುವುದು ಬೆಳಕಿಗೆ ಬಂದಿದೆ. ಕಿರಣ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ವರ್ಷಾ ತಲೆಮಾರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ನೀಡಲಾಗುವುದು ಎಂದು ಎಸ್​ಎಸ್​ಪಿ ಸಂಜಯ್​ ವರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net