ಗರ್ಭಿಣಿ ಎಂಬುದನ್ನುನೋಡದೆ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿತ; ಪತಿ ಎಸ್ಕೇಪ್​, ಹಲ್ಲೆಯ Video Viral

Assault Case
Published on

ರಾಯ್​ಪುರ: ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಆಕೆಯ ಅತ್ತೆ ಮನೆಯವರು ಹಾಗೂ ಸ್ಥಳೀಯರು ಸೇರಿಕೊಂಡು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಛತ್ತೀಸ್​ಗಢದ ರಾಯ್‌ಗಢ್ ಜಿಲ್ಲೆಯ ಪುಸೌರ್ ಬ್ಲಾಕ್‌ನ ತಿನ್ಮಿನಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಜೊತೆಗೆ ಆಕೆಯ ವಿಕಲಾಂಗ ಪೋಷಕರನ್ನು ಥಳಿಸಿದ್ದು, ಘಟನೆಯು ವ್ಯಾಪಕ ಖಂಡನೆಗೆ ಗುರಿಯಾಗಿದೆ. 

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪೋಷಕರನ್ನು ಕಾರಿನಿಂದ ಹೊರಗೆ ಎಳೆದೊಯ್ದು ಮಹಿಳೆಯರು ಹಾಗೂ ಗ್ರಾಮಸ್ಥರು ಅಮಾನುಷವಾಗಿ ಥಳಿಸುತ್ತಿದ್ದು, ಗರ್ಭಿಣಿಯ ಹೊಟ್ಟೆ ಮೇಲೆ ಕಲ್ಲು ಹಾಗೂ ಇನ್ನಿತರೆ ವಸ್ತುಗಳಿಂದ ಹಲ್ಲೆ ಮಾಡಲಾಗುತ್ತಿದೆ. ಮಹಿಳೆಯೊಬ್ಬರು ಆಕೆಯ ಮೇಲೆ ಹತ್ತಿ ಕುಣಿದಾಡುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ (Video Viral) ನೋಡಬಹುದಾಗಿದೆ.

ಘಟನೆಯ ಕುರಿತು ಮಾತನಾಡಿರುವ ಎಸ್​ಪಿ ಆಕಾಶ್ ಮಾರ್ಕಮ್​, ಸಂತ್ರಸ್ತೆ ಅನುಷಾ ಗುಪ್ತಾ ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಎಸ್​ಎಸ್​ಬಿಯಲ್ಲಿ ಜವಾನ್​ ಆಗಿ ಕಾರ್ಯನಿರ್ವಹಿಸುತ್ತಿರುವ ಮಧುಸುದನ್​ ಎಂಬುವವರನ್ನು ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ದಂಪತಿಗಳು ಉತ್ತರಾಖಂಡ್​ನಲ್ಲಿ ವಾಸಿಸುತ್ತಿದ್ದರು.

ತಮ್ಮ ಮನೆಯವರು ಕರೆ ಮಾಡಿ ಬರುವಂತೆ ಸೂಚಿಸಿದ್ದಕ್ಕೆ ಮಧುಸುದನ್​ ಪತ್ನಿಯನ್ನು ಕರೆದುಕೊಂಡು ಛತ್ತೀಸ್‌ಗಢ ಎಕ್ಸ್‌ಪ್ರೆಸ್‌ನಲ್ಲಿ ತವರೂರಿಗೆ ಹೊರಟ್ಟಿದ್ದರು. ಡೊಂಗರ್‌ಗಢ್​ನಲ್ಲಿ ಮಧುಸುದನ್ ತನ್ನ ಪತ್ನಿಯನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದಾನೆ. ಬಳಿಕ ಸಂತ್ರಸ್ತೆ ತನ್ನ ವಿಕಲಾಂಗ ಪೋಷಕರನ್ನು ಕರೆದುಕೊಂಡು ಪತಿಯ ಸ್ವಗ್ರಾಮಕ್ಕೆ ತೆರಳಿದ್ದು, ಈ ವೇಳೆ ಆಕೆಯ ಅತ್ತೆ ಮನೆಯವರು ಹಾಗೂ ಗ್ರಾಮಸ್ಥರು ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ತಾಯಿ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್​ಪಿ ಆಕಾಶ್ ಮಾರ್ಕಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net