

ಕಾರ್ಕಳ: ಪತಿಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ ಪತ್ನಿಯೂ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಿಯ್ಯರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮಿಯ್ಯರು ಕುಂಟಿಬೈಲು ಮಂಜಡ್ಕ ನಿವಾಸಿ ಅಂಗನವಾಡಿ ಕಾರ್ಯಕರ್ತೆ ಸೌಮ್ಯ (39) ಆತ್ಮಹತ್ಯೆ ಮಾಡಿಕೊಂಡವರು. 15 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಉತ್ತಮ ಹೆಸರು ಗಳಿಸಿದ್ದು, ಇಬ್ಬರು ಪುತ್ರಿ ಹಾಗೂ ಪತಿ ಜತೆಗೆ ವಾಸಿಸುತ್ತಿದ್ದರು. ತಿಂಗಳ ಹಿಂದೆಯಷ್ಟೇ ಪತಿ ನಿಧನರಾಗಿದ್ದು, ಇದರಿಂದ ಸೌಮ್ಯ ಮಾನಸಿಕವಾಗಿ ಕುಗ್ಗಿದ್ದರು. ಇದೇ ನೋವಿನಲ್ಲಿ ಮಿಯ್ಯರಿನ ತನ್ನ ಮನೆಯ ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯಾಗಿರುವುದರ ಜತೆಗೆ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು.