ಪತ್ನಿ-ಮಕ್ಕಳೇ ಹಂತಕರು; ಮನೆಯಲ್ಲಿ ಕೊಂದು ಕಾಡಲ್ಲಿ ಶವ ಸುಟ್ಟರು!: ಬಯಲಾಯ್ತು ಅರಣ್ಯದಲ್ಲಿ ಪತ್ತೆಯಾದ ಸುಟ್ಟ ಕಾರಿನ ಪ್ರಕರಣ

Accused
ಆರೋಪಿಗಳು
Published on

ತೀರ್ಥಹಳ್ಳಿ: ತಾಲೂಕಿನ ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿನ ಮಧ್ಯೆ ಪತ್ತೆಯಾದ ಸುಟ್ಟ ಕಾರಿನ ಪ್ರಕರಣವನ್ನು ತೀರ್ಥಹಳ್ಳಿ ಪೊಲೀಸರು ಭೇದಿಸಿದ್ದು, ಇದು ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲ, ಕೊಲೆ ಮಾಡಿ ಶವವನ್ನು ಕಾರಿನಲ್ಲಿಟ್ಟು ದಹನ ಮಾಡಲಾಗಿದೆ ಎಂಬುದು ಬಯಲಾಗಿದೆ. ಆಘಾತಕಾರಿ ಸಂಗತಿ ಎಂದರೆ ಪತ್ನಿಯೇ ತನ್ನ ಮಕ್ಕಳು ಮತ್ತು ಸಂಬಂಧಿಕರ ನೆರವಿನಿಂದ ಪತಿಯನ್ನು ಹತ್ಯೆ ಮಾಡಿರುವುದು.

ಸುಟ್ಟ ಕಾರಿನಲ್ಲಿ ಡ್ರೈವರ್ ಸೀಟಿನಲ್ಲಿ ಇದ್ದ ಅಸ್ಥಿಪಂಜರ ಸಾಗರ ತಾಲೂಕು ಆನಂದಪುರದ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ವಿನೋದ್ (45) ಎಂಬುವರದ್ದು ಎಂದು ದೃಢಪಟ್ಟಿದೆ. ಪತ್ನಿ ವಿನೂ(40), ಹಿರಿಯ ಮಗ ವಿವೇಕ್(23), ಕಿರಿಯ ಮಗ ವಿಷ್ಣು (19), ವಿನೋದ್ ಸಹೋದರ ಸಂಜಯ್(23) ಮತ್ತು ವಿನೋದ್ ಪತ್ನಿಯ ಅಕ್ಕನ ಮಗ, ರಿಪ್ಪನ್‌ಪೇಟೆ ಸಮೀಪದ ಬೆಳಕೋಡು ಗ್ರಾಮದ ಅಶೋಕ್ (19) ಸೇರಿ ಈ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿನೋದ್ ಹತ್ಯೆಯಲ್ಲಿ ಕುಟುಂಬಸ್ಥರ ಕೈವಾಡ ಇರುವ ಸಣ್ಣ ಸುಳಿವು ಹಿಡಿದು ಬೆನ್ನು ಹತ್ತಿದ ಡಿವೈಎಸ್​​ಪಿ ಶಾಂತವೀರ ನೇತೃತ್ವದ ಪೊಲೀಸರ ತಂಡ ವಿನೋದ್ ಪತ್ನಿ ಸೇರಿ ಐವರನ್ನು ಬಂಧಿಸಿದೆ. ಪತ್ನಿ ಮತ್ತು ಮಕ್ಕಳಿಗೆ ವಿನೋದ್ ಹಿಂಸೆ ನೀಡುತ್ತಿದ್ದ. ಇದರಿಂದ ರೋಸಿ ಹೋಗಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 28ರಂದು ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಸಂಬಂಧ ಜೇಡಿಕುಣಿ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದ್ದರು. ತನಿಖೆ ಕೈಗೊಂಡ ತೀರ್ಥಹಳ್ಳಿ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಮಾಡಿ ವಿಚಾರಣೆ ಕೈಗೊಂಡಾಗ ಮೃತ ವ್ಯಕ್ತಿ ಆಚಾಪುರ ಗ್ರಾಮದ ವಿನೋದ್ ಎಂಬುದು ಗೊತ್ತಾಗಿತ್ತು. ತನಿಖೆ ವೇಳೆ ಮನೆಯವರ ಮೇಲೆಯೇ ಶಂಕೆ ಉಂಟಾಗಿದ್ದರಿಂದ ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ವಿನೋದ್ ಕೊಲೆಯ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ.

ಮನೆಯಲ್ಲೇ ಕೊಲೆ

ಸೆಪ್ಟೆಂಬರ್ 25ರಂದು ಐವರು ಆರೋಪಿಗಳು ವಿನೋದ್ ಕೊಲೆಗೆ ಸಂಚು ರೂಪಿಸಿದ್ದರು. 26ರಂದು ಬೆಳಗ್ಗೆ ಆನಂದಪುರದ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿಟ್ಟುಕೊಂಡು ಅಂದು ರಾತ್ರಿ 8.30ರ ಸಮಯದಲ್ಲಿ ಮನೆಯಲ್ಲೇ ತಂತಿ, ಸುತ್ತಿಗೆ, ಕಬ್ಬಿಣದ ಪೈಪ್, ರಾಡ್‌ನಿಂದ ವಿನೋದ್​ಗೆ ಹೊಡೆದು ಕೊಲೆ ಮಾಡಿದ್ದರು. ಬಳಿಕ ವಿನೋದ್ ಬಳಸುತ್ತಿದ್ದ ಕಾರಿನಲ್ಲೇ ಮೃತದೇಹವನ್ನು ಸಾಗಿಸಲಾಗಿದೆ.

ತನಿಖೆ ವೇಳೆ ಪೊಲೀಸರಿಗೆ ಅನುಮಾನ ಬಾರದಿರಲಿ ಎಂದು ಆರೋಪಿಗಳು ತಮ್ಮ ಮೊಬೈಲ್​ಫೋನ್​ ಸ್ವಿಚ್‌ಆಫ್ ಮಾಡಿ ಮನೆಯಲ್ಲೇ ಇಟ್ಟು ಹೋಗಿದ್ದರು. ಶವವನ್ನು ಕಾರಿನಲ್ಲಿ ಯಡೇಹಳ್ಳಿ, ರಿಪ್ಪನ್‌ಪೇಟೆ, ಹುಂಚದಕಟ್ಟೆ, ಶಂಕ್ರಳ್ಳಿ ಮಲೇಸರ ಮಾರ್ಗವಾಗಿ ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಗ್ರಾಮದ ಹುಣಸೆಕೊಪ್ಪ ಅರಣ್ಯ ಪ್ರದೇಶಕ್ಕೆ ಸಾಗಿಸಿ ಚಾಲಕನ ಸೀಟಿನಲ್ಲಿ ಮೃತದೇಹವನ್ನು ಇರಿಸಿ ಮೊದಲೇ ಖರೀದಿಸಿಟ್ಟಿದ್ದ ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿ ವಾಪಸ್ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಗಳ ಸಾವಿಗೆ ಆ ನಟನೇ ಕಾರಣ: ಆತ್ಮಹತ್ಯೆ ಮಾಡಿಕೊಂಡ ನಟಿಯ ತಂದೆಯ ಆರೋಪ, ಪೊಲೀಸರಿಗೆ ದೂರು..ಸುಳಿವು ಸಿಗದಂತೆ ಮುನ್ನೆಚ್ಚರಿಕೆ: ಚಾಲಕನ ಸೀಟಿನಲ್ಲಿ ಶವ ಇಟ್ಟು ಕಾರಿಗೆ ಬೆಂಕಿ ಹಚ್ಚಿ ಸುಡುವ ಮುನ್ನ ಕಾರಿನ ನಂಬರ್ ಪ್ಲೇಟ್ ಮತ್ತು ವಿನೋದ್ ಬಳಸುತ್ತಿದ್ದ ಮೊಬೈಲ್ ಫೋನನ್ನು ದಾರಿ ಮಧ್ಯೆ ಎಸೆದು ಆರೋಪಿಗಳು ಮನೆಗೆ ಮರಳಿದ್ದರು. ಮನೆಯಲ್ಲಿ ಕೊಲೆ ಮಾಡಿದ್ದ ಜಾಗವನ್ನು ಫಿನಾಯಿಲ್ ಬಳಸಿ ಸ್ವಚ್ಛಗೊಳಿಸಿದ್ದರು. ಜತೆಗೆ ಕೃತ್ಯದ ವೇಳೆ ಆರೋಪಿಗಳು ತಾವು ಬಳಸಿದ್ದ ಬಟ್ಟೆ, ಚಪ್ಪಲಿಗಳನ್ನು ಮನೆಯ ಹಿಂಭಾಗದಲ್ಲಿ ಸುಟ್ಟು ಹಾಕಿದ್ದರು.

ಇದನ್ನೂ ಓದಿ: ‘ಮೋದಿ ಇರೋದ್ಕೆ ಅವನು ಬದ್ಕಿದಾನೆ’; ದುಷ್ಕರ್ಮಿಗಳ ಕಿಡಿಗೇಡಿತನ ಕಂಡು ಬಾಯಿಗೆ ಬಂದ ಹಾಗೆ ಬೈದ ಮಹಿಳೆ..ಪೊಲೀಸರ ಬಗ್ಗೆ ಮೆಚ್ಚುಗೆ: ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಇ.ಶಾಂತವೀರ, ಸಿಪಿಐ ಸಂತೋಷ್‌ಕುಮಾರ್, ಪಿಎಸ್‌ಐ ಆರ್.ಸುಷ್ಮಾ, ಸಿಬ್ಬಂದಿ ಸುಧಾಕರ್, ಜನಾರ್ದನ , ಕುಮಾರ್, ಪುನೀತ್, ದಿವಾಕರ್, ಮೇಘರಾಜ್, ಕೆ.ಮಂಜುನಾಥ್ , ಜೋಸೆಫ್ ಮ್ಯಾಥ್ಯೂ, ಚಂದ್ರಪ್ಪ, ಭರತ್, ಗಿರೀಶ್, ಕಿರಣಕುಮಾರ್, ದೀಪಕ್, ಮಹಮದ್ ಆಸೀಫ್, ಅವಿನಾಶ್, ಚಾಲಕರಾದ ಎಚ್.ವೈ.ವಿಜಯ್, ಅವಿನಾಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ವಿಎನ್ಸಿ ವಿಭಾಗದ ಗುರುರಾಜ್, ಇಂದ್ರೇಶ್, ವಿಜಯ್‌ಕುಮಾರ್ ತಂಡದ ಕಾರ್ಯಾಚರಣೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರಗ ಗ್ರಾಪಂ ವ್ಯಾಪ್ತಿಯ ಕಾಡಿನಲ್ಲಿ ಸೆ.26ರಂದು ವ್ಯಕ್ತಿಯನ್ನು ಕೊಲೆ ಪೆಟ್ರೋಲ್ ಸುರಿದು ಕಾರು ಸಮೇತ ಸುಟ್ಟುಹಾಕಿದ್ದ ಪ್ರಕರಣವನ್ನು ಬೇಧಿಸಲಾಗಿದೆ. ಮೃತನ ಪತ್ನಿ, ಇಬ್ಬರು ಮಕ್ಕಳು, ಸಹೋದರ ಮತ್ತು ಪತ್ನಿಯ ಅಕ್ಕನ ಮಗನನ್ನೂ ಬಂಧಿಸಲಾಗಿದೆ. ಕಾರು ಮಾಲೀಕನ ಪತ್ತೆ ಬೆನ್ನಲ್ಲೇ ಕೊಲೆ ಎಂಬುದು ಖಚಿತಗೊಂಡಿತ್ತು. ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಾಗ ಆರೋಪಿಗಳು ಸೆರೆ ಸಿಕ್ಕಿದ್ದಾರೆ.| ಇ.ಶಾಂತವೀರ ತೀರ್ಥಹಳ್ಳಿ ಡಿವೈಎಸ್​​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net