

ಬೆಂಗಳೂರು: ಕರೊನಾ ಕಾಟದ ನಡುವೆ ಹೇಗೋ ಶೇ. 100 ಆಸನ ಭರ್ತಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಒಂದಷ್ಟು ಖುಷಿಯಲ್ಲಿದ್ದ ನಿರ್ಮಾಪಕರ ಖುಷಿಯನ್ನು ಪೈರಸಿ ಕಾಟ ಕಿತ್ತುಕೊಂಡಿದೆ. ಬಿಡುಗಡೆಗೆ ಸಜ್ಜಾಗಿರುವ ದೊಡ್ಡ ದೊಡ್ಡ ಸಿನಿಮಾಗಳಿಗೇ ಪೈರಸಿ ಭೂತ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘದವರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ಕನ್ನಡದ ಹೊಸ ಸಿನಿಮಾಗಳ ಬಿಡುಗಡೆ ದಿನವೇ ಪೈರಸಿ ಕಾಪಿಗಳನ್ನು ಹಂಚಿಕೊಳ್ಳಲಿದ್ದೇವೆ ಎಂದು ಕೆಲವೊಂದು ಪೈರಸಿಗಾರರು ಟೆಲಿಗ್ರಾಮ್ ಗ್ರೂಪ್/ಚಾನೆಲ್ಗಳನ್ನು ಮಾಡಿಕೊಂಡು ಒಂಥರ ಧಮ್ಕಿ ಹಾಕಿರುವುದು ಹೊಸ ಸಿನಿಮಾಗಳ ನಿರ್ಮಾಪಕರಿಗೆ, ಚಿತ್ರತಂಡಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗೆ ಪೈರಸಿ ಬೆದರಿಕೆ ಒಡ್ಡಿರುವ 50ಕ್ಕೂ ಅಧಿಕ ಟೆಲಿಗ್ರಾಮ್ ಗ್ರೂಪ್/ಚಾನೆಲ್ಗಳು ಸಕ್ರಿಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿರ್ಮಾಪಕರ ಸಂಘ ಪೊಲೀಸರ ಮೊರೆ ಹೋಗಿದೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ಕುಮಾರ್ ಅವರ ನೇತೃತ್ವದಲ್ಲಿ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಕೆ.ಮಂಜು, ಎ. ಗಣೇಶ್, ರಮೇಶ್ ಯಾದವ್ ಮುಂತಾವರು ಇಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹಾಗೂ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಕೋಟಿಗೊಬ್ಬ-3, ಸಲಗ, ಭಜರಂಗಿ2 ಮುಂತಾದ ಬಿಗ್ಬಜೆಟ್ನ ಬಹುನಿರೀಕ್ಷಿತ ಸಿನಿಮಾಗಳು ಇನ್ನೇನು ಬಿಡುಗಡೆ ಆಗಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ದೂರು ನೀಡಲಾಗಿದೆ.