Milestones: ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ಕಿಲೋಮೀಟರ್ ಸೂಚಿಸುವ ಇಂತಹ ಮೈಲಿಗಲ್ಲುಗಳನ್ನು ಪ್ರತಿಯೊಬ್ಬರು ನೋಡಿಯೇ ಇರುತ್ತಾರೆ. ಯಾವುದಾದರೂ ಊರಿಂದ ಊರಿಗೆ ಪ್ರಯಾಣಿಸುವಾಗ ದಾರಿಯೇ ಮಧ್ಯೆ ಈ ರೀತಿಯ ಮೈಲಿಗಲ್ಲುಗಳು ಊರಿನ ದೂರವನ್ನು ಅಳೆದು ಇಷ್ಟೇ ದೂರವಿದೆ ಎಂದು ಹೇಳುತ್ತದೆ. ಕಿಲೋಮೀಟರ್ ಹಾಗೂ ಊರಿನ ಹೆಸರನ್ನು ಸೂಚಿಸುವ ಈ ಮೈಲಿಗಲ್ಲುಗಳಲ್ಲಿ ಇರುವ ಬಣ್ಣಗಳು ಏನು ಹೇಳುತ್ತವೆ? ಯಾವ ಕಾರಣಕ್ಕಾಗಿ ಇದರ ಮೇಲೆ ಬಣ್ಣಗಳನ್ನು ಬಳೆಯಲಾಗಿದೆ? ಇವುಗಳ ಹಿಂದಿರುವ ಉದ್ದೇಶವೇನು ಎಂಬ ಸಂಗತಿ ಬಹುತೇಕರಿಗೆ ಇಂದಿಗೂ ತಿಳಿದಿಲ್ಲ.
ಸಾಮಾನ್ಯವಾಗಿ ಹೊರಗಿನ ರಾಜ್ಯಗಳ ಮೈಲಿಗಲ್ಲುಗಳ ಮೇಲೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಊರಿನ ಹೆಸರನ್ನು ಬರೆಯಲಾಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಅಲ್ಲಿನ ಭಾಷೆಯಲ್ಲಿಯೇ ಅಕ್ಷರಗಳನ್ನು ಬರೆದು, ಕಿ.ಮೀ ಸೂಚಿಸಲಾಗುತ್ತದೆ. ಕೇವಲ ರಾಜ್ಯದಿಂದ ರಾಜ್ಯಕ್ಕೆ ಮಾತ್ರ ಸೀಮತವಾಗದ ಈ ಮೈಲಿಗಲ್ಲುಗಳು, ತಾಲೂಕು, ಗ್ರಾಮಗಳ ದೂರವನ್ನು ಸಹ ತಿಳಿಸುತ್ತದೆ. ನಮ್ಮ ದೇಶವು 58.98 ಲಕ್ಷ ಕಿಲೋಮೀಟರ್‌ಗಳ ವಿಸ್ತಾರವಾದ ರಸ್ತೆಗಳನ್ನು ಹೊಂದಿದ್ದು, ಗ್ರಾಮೀಣ ರಸ್ತೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ಒಳಗೊಂಡಿವೆ. ಅಸಲಿಗೆ ಮೈಲಿಗಲ್ಲುಗಳ ಮೇಲಿನ ಬಣ್ಣ ಯಾವುದರ ಸಂಕೇತ? ಹೇಳುವುದೇನು? ಎಂಬುದರ ವಿವರ ಹೀಗಿದೆ ಗಮನಿಸಿ.
ಕೇಸರಿ/ ಆರೆಂಜ್ ಬಣ್ಣದ ಮೈಲಿಗಲ್ಲು
ಕೇಸರಿ ಬಣ್ಣದಲ್ಲಿ ಚಿತ್ರಿಸಲಾದ ಮೈಲಿಗಲ್ಲು ನೀವು ಗ್ರಾಮೀಣ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಹೇಳುತ್ತದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಮತ್ತು ಜವಾಹರ್ ರೋಜ್‌ಗಾರ್ ಯೋಜನೆ (JRY) ನಂತಹ ಮಹತ್ವಾಕಾಂಕ್ಷೆಯ ಉಪಕ್ರಮಗಳ ಅಡಿಯಲ್ಲಿ ನಿರ್ಮಿಸಲಾದ ಗ್ರಾಮೀಣ ರಸ್ತೆಗಳು 3.93 ಲಕ್ಷ ಕಿ.ಮೀ. ಉದ್ದವನ್ನು ವ್ಯಾಪಿಸಿವೆ. ಇವು ನೀವು ಹಳ್ಳಿ ಮಾರ್ಗಗಳಲ್ಲಿ ಸಾಗುತ್ತಿದ್ದೀರಿ ಎಂದು ತಿಳಿ ಹೇಳುತ್ತದೆ.
ಹಳದಿ/ ಯೆಲ್ಲೋ ಬಣ್ಣದ ಮೈಲಿಗಲ್ಲು
ಹಳದಿ ಬಣ್ಣದ ಮೈಲಿಗಲ್ಲು ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಹೇಳುತ್ತದೆ. ಅವು ವಿವಿಧ ನಗರಗಳು ಮತ್ತು ರಾಜ್ಯಗಳ ಸಂಪರ್ಕ ಇರುವುದನ್ನು ಪ್ರತಿನಿಧಿಸುತ್ತವೆ.
ಕಪ್ಪು ಅಥವಾ ನೀಲಿ ಬಣ್ಣದ ಮೈಲಿಗಲ್ಲು
ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳನ್ನು ಹೊಂದಿರುವ ಮೈಲಿಗಲ್ಲುಗಳು ನೀವು ನಗರ ಅಥವಾ ಜಿಲ್ಲೆಯ ರಸ್ತೆಗಳಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಹೇಳುತ್ತದೆ. ಪ್ರಸ್ತುತ ಭಾರತದಲ್ಲಿ 5,61,940 ಕಿಮೀ ಉದ್ದದ ಜಿಲ್ಲಾ ರಸ್ತೆಗಳ ಜಾಲವಿದೆ.
ಹಸಿರು ಬಣ್ಣದ ಮೈಲಿಗಲ್ಲು
ಹಸಿರು ಬಣ್ಣವನ್ನು ಹೊಂದಿರುವ ಮೈಲಿಗಲ್ಲುಗಳನ್ನು ರಾಜ್ಯ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುತ್ತದೆ. ಅವು ರಾಜ್ಯದ ವಿವಿಧ ನಗರಗಳನ್ನು ಸಂಪರ್ಕಿಸುತ್ತವೆ ಮತ್ತು 2016ರಲ್ಲಿ ನೀಡಲಾದ ದತ್ತಾಂಶದ ಪ್ರಕಾರ 1,76,166 ಕಿ.ಮೀ ಉದ್ದವನ್ನು ಈ ಮೈಲಿಗಲ್ಲುಗಳು ವ್ಯಾಪಿಸಿವೆ ಎಂದು ವರದಿಯಾಗಿದೆ,(ಏಜೆನ್ಸೀಸ್).
20 ಪುರುಷರ ಹಣ 1 ಬಸ್ಗೆ.. ಉಚಿತ ಪ್ರಯಾಣ ಭಾಗ್ಯ ಕೊಟ್ಟ ಸರ್ಕಾರಕ್ಕೆ ಪ್ರಯಾಣಿಕನ 6 ನೇರ ಪ್ರಶ್ನೆಗಳಿವು | Freebies