4 ಗ್ರಹಗಳ ಸಂಯೋಜನೆ... 144 ವರ್ಷಕ್ಕೊಮ್ಮೆ ನಡೆಯೋ ಮಹಾ ಕುಂಭಮೇಳದ ವಿಶೇಷವೇನು? ಸಮುದ್ರ ಮಂಥನಕ್ಕಿರುವ ನಂಟೇನು? Maha Kumbh Mela 2025

Maha Kumbh Mela 2025
Published on

Maha Kumbh Mela 2025 : ಭಾರತದಲ್ಲಿ ನಡೆಯುವ ಅತಿ ದೊಡ್ಡ ಉತ್ಸವ ಅಂದರೆ ಅದು ಕುಂಭಮೇಳ. ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಅಚ್ಚರಿ ಸಂಗತಿ ಏನೆಂದರೆ, ಈ ಮಹಾ ಉತ್ಸವ ಬಾಹ್ಯಾಕಾಶದಿಂದಲೂ ಗೋಚರಿಸುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಆದರೆ, ಈ ಬಾರಿ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವುದು ಮಹಾ ಕುಂಭಮೇಳ. ಇದು 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಘಟನೆಯಾಗಿದೆ.

ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಲಕ್ಷಾಂತರ ಭಕ್ತರಿಗೆ ಆತಿಥ್ಯ ವಹಿಸಲು ಪ್ರಯಾಗರಾಜ್​ ನಗರವು ಸಿದ್ಧವಾಗುತ್ತಿದೆ. ಇದರಿಂದ ಸಾಧುಗಳು, ಕಲ್ಪವಾಸಿಗಳು, ಯಾತ್ರಿಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಉತ್ಸಾಹ ತೀವ್ರವಾಗಿದೆ. ಅಂದಹಾಗೆ ಗ್ರಹಮಂಡಲ, ನಕ್ಷತ್ರಗಳ ಅಪರೂಪದ ಖಗೋಳ ಕೌತುಕದಲ್ಲಿ 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ಜರಗುತ್ತದೆ. ಅದು 2025ರಲ್ಲಿ ನಡೆಯುತ್ತಿರುವುದು ವಿಶೇಷತೆಯಾಗಿದೆ.

ಪ್ರಯಾಗರಾಜ್​ನಲ್ಲಿ 44ಕ್ಕೂ ಅಧಿಕ ದಿನಗಳ ಕಾಲ ಮಹಾಕುಂಭಮೇಳ ನಡೆಯಲಿದೆ. ಜನವರಿ 14ರ ಮಕರ ಸಂಕ್ರಾಂತಿ ದಿನದಂದು ಆರಂಭಗೊಳ್ಳಲಿದ್ದು, ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಮುಕ್ತಾಯವಾಗಲಿದೆ. ಈ ವೇಳೆ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಭಾಗವಹಿಸಿ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಗಂಗಾ, ಯುಮುನಾ ಹಾಗೂ ಅದೃಶ್ಯವಾಗಿ ಹರಿಯುತ್ತಿದ್ದಾಳೆಂಬ ಸರಸ್ವತಿ ನದಿಯ ಸಂಗಮವೇ ತ್ರಿವೇಣಿ ಸಂಗಮ. ಈ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲ ತೊಳೆದು ಹೋಗಿ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.

144 ವರ್ಷಗಳಿಗೆ ಒಮ್ಮೆ ಬರುವ ಗ್ರಹಗಳ ಸಂಯೋಜನೆಯಂದೇ ಈ ಮಹಾ ಕುಂಭಮೇಳ ನಡೆಯಲಿದೆ. ಅಂದರೆ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಆಕಾಶದಲ್ಲಿ ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡಾಗ ಗ್ರಹಗಳ ಸಂಯೋಗ ಸಂಭವಿಸುತ್ತದೆ. ಅಂದಹಾಗೆ ಈ ಗ್ರಹಗಳ ಸಂಯೋಜನೆಯು ಸಮುದ್ರ ಮಂಥನ ದಂತಕಥೆಗೆ ಸಂಬಂಧಿಸಿದೆ. ಸಮುದ್ರ ಮಂಥನವು ಹಿಂದು ಪುರಾಣದ ಅತಿ ಮುಖ್ಯ ಘಟನೆಯಾಗಿದೆ. ದೇವತೆಗಳು ಮತ್ತು ರಾಕ್ಷಸರ ನಡುವೆ ಅಮರತ್ವದ ಅಮೃತಕ್ಕಾಗಿ ಯುದ್ಧ ನಡೆಯಿತು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ದೇವಲೋಕದ ರಾಜ ಇಂದ್ರನ ಮಗನಾದ ಜಯಂತ, ಅಮೃತ ತುಂಬಿದ ಪಾತ್ರೆಯನ್ನು ತೆಗೆದುಕೊಂಡು ಹೋದಾಗ, ಅಮೃತವನ್ನು ರಕ್ಷಿಸಲು ಮತ್ತು ಜಯಂತನಿಗೆ ಬೆಂಬಲವಾಗಿ ನಿಲ್ಲಲು ನಾಲ್ಕು ದೇವರುಗಳಿಗೆ ವಿಭಿನ್ನ ಕರ್ತವ್ಯಗಳನ್ನು ವಹಿಸಲಾಯಿತು. ಸೂರ್ಯನಿಗೆ ಪಾತ್ರೆಯನ್ನು ಹಿಡಿದಿಡಲು ಕೇಳಲಾಯಿತು, ಚಂದ್ರನಿಗೆ ಅಮೃತವು ಹೊರಗೆ ಹೋಗದಂತೆ ನೋಡಿಕೊಳ್ಳುವ ಕೆಲಸವನ್ನು ವಹಿಸಲಾಯಿತು, ಗುರುವಿಗೆ (ಬೃಹಸ್ಪತಿ) ಜಯಂತನನ್ನು ಅಸುರರಿಂದ ರಕ್ಷಿಸುವ ಜವಾಬ್ದಾರಿಯನ್ನು ವಹಿಸಲಾಯಿತು ಮತ್ತು ಅಂತಿಮವಾಗಿ ಈ ಸಂಘರ್ಷದಲ್ಲಿ ಅಂದರೆ ಯುದ್ಧದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಶನಿಗೆ ಹೇಳಲಾಯಿತು.

ದೇವತೆಗಳು ಮೊದಲು ಅಮೃತದ ಮಡಕೆಯನ್ನು ಹರಿದ್ವಾರಕ್ಕೆ ತಂದರು ಎಂದು ಪುರಾಣ ಹೇಳುತ್ತದೆ. ಹರಿದ್ವಾರದ ಬಳಿಕ ಪ್ರಯಾಗರಾಜ್​ಗೆ ತರಲಾಯಿತು. ಆ ಸಮಯದಲ್ಲಿ ದೇವತೆಗಳಿಗೆ ಪ್ರಯಾಗದಲ್ಲಿ ಪರಿಸ್ಥಿತಿ ಎಷ್ಟು ಪ್ರತಿಕೂಲವಾಗಿತ್ತೆಂದರೆ, ಅಸುರರು ಅಮೃತ ಕಲಶವನ್ನು ವಶಪಡಿಸಿಕೊಳ್ಳುವುದು ಖಚಿತವಾಗಿತ್ತು. ಹೀಗಾಗಿ, ಸೂರ್ಯ, ಚಂದ್ರ, ಶನಿ ಮತ್ತು ಗುರುಗಳು ಮಡಕೆಯನ್ನು ರಕ್ಷಿಸಲು ಒಟ್ಟಿಗೆ ಧಾವಿಸಿದರು. ಆ ಕ್ಷಣದಲ್ಲಿ ನಕ್ಷತ್ರದ ಅಪರೂಪದ ಆಕಾಶ ಸ್ಥಾನೀಕರಣವೂ ಸಂಭವಿಸಿತು. ಅದೇ ಸಮಯದಲ್ಲಿ ಸನಕ, ಸನಂದನ, ಸನಾತನ ಮತ್ತು ಸನತ್​ಕಮಾರ ಸೇರಿದಂತೆ ನಾಲ್ವರು ಋಷಿಗಳು ಪ್ರಯಾಗದಲ್ಲಿ ಬಿಡಾರ ಹೂಡಲು ನಿರ್ಧರಿಸಿದರು. ಇಂದು ನಾವು ಕುಂಭ ಎಂದು ಕರೆಯುವ ಇದೇ ಪರಿಕಲ್ಪನೆಯ ಆರಂಭವು ಪ್ರಾರಂಭವಾಯಿತು.

ಇದೀಗ 144 ವರ್ಷಗಳ ನಂತರ ಎಲ್ಲ ನಾಲ್ಕು ಗ್ರಹಗಳ ಸ್ಥಾನೀಕರಣವು ಒಂದೇ ಸಾಲಿನಲ್ಲಿ ಬರುತ್ತದೆ. ಜನವರಿ 29ರ ಅಮಾವಾಸ್ಯೆಗೂ ಮೂರು ಗಂಟೆಗಳ ಮೊದಲು, ಮುಖ್ಯವಾಗಿ ಪುಷ್ಯ ನಕ್ಷತ್ರವು ನಾಲ್ಕು ಗ್ರಹಗಳೊಂದಿಗೆ ಒಂದೇ ಸಾಲಿನಲ್ಲಿ ಬರುತ್ತದೆ. ಹೀಗಾಗಿ, ಈ ಹಿಂದೆ ನಡೆದ ಎಲ್ಲ ಮಹಾ ಕುಂಭಗಳಲ್ಲಿ 2025ರಲ್ಲಿ ನಡೆಯುವ ಮಹಾ ಕುಂಭಮೇಳವು ಅತ್ಯಂತ ಮಂಗಳಕರವಾದದ್ದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net