ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಸರಬ್ಜೋತ್​ ಸರ್ಕಾರಿ ಕೆಲಸ ತಿರಸ್ಕರಿಸಿದ್ದೇಕೆ? ಇಲ್ಲಿದೆ ಅಚ್ಚರಿಯ ಕಾರಣ!

Sarabjot Singh
Published on

ನವದೆಹಲಿ: ಸರ್ಕಾರಿ ಕೆಲಸ ಪಡೆಯುವುದಕ್ಕಾಗಿ ಹಗಲಿರುಳು ಶ್ರಮಿಸುವ ಜನರ ನಡುವೆ ಭಾರತದ ಶೂಟಿಂಗ್​ ವೀರ, ಪ್ಯಾರಿಸ್​ ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್ ಸರ್ಕಾರಿ ನೌಕರಿ ಬೇಡ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತನ್ನ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸರಬ್ಜೋತ್ ಇದೀಗ ಬಹಿರಂಗಪಡಿಸಿದ್ದಾರೆ.

ಸರಬ್ಜೋತ್ ಅವರು ಮನು ಭಾಕರ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಪಡೆದರು. ಇದಕ್ಕೂ ಮುನ್ನ ವೈಯಕ್ತಿಕ ಸ್ಪರ್ಧೆಯಲ್ಲಿ ಪದಕ ಸುತ್ತಿಗೆ ಹತ್ತಿರ ಬಂದು, ಅವಕಾಶ ಮಿಸ್​ ಮಾಡಿಕೊಂಡರು. ಆದರೂ ಮಿಶ್ರ ಸ್ಪರ್ಧೆಯಲ್ಲಿ ಸರಬ್ಜೋತ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಹೀಗಾಗಿ ಅಭಿಮಾನಿಗಳು ಮತ್ತು ಹರಿಯಾಣ ರಾಜ್ಯದ ಜನರು ಅವರನ್ನು ಕೊಂಡಾಡಿದ್ದಾರೆ.

ಸದ್ಯ ಒಲಿಂಪಿಕ್ಸ್​ ಮುಗಿಸಿ ಸರಬ್ಜೋತ್ ಅವರು ತವರಿಗೆ ಮರಳಿದ್ದಾರೆ. ಕಂಚಿನ ಪದಕ ಗೆದ್ದಿರುವ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಮೆಚ್ಚುಗೆಯ ಸಂಕೇತವಾಗಿ ಸರ್ಕಾರಿ ಕೆಲಸ ಕೊಡಲು ನಿರ್ಧರಿಸಿದೆ. ಆದಾಗ್ಯೂ ಸರಬ್ಜೋತ್ ತನಗೆ ಸರ್ಕಾರಿ ಕೆಲಸ ಬೇಡ ಎಂದು ನಿರಾಕರಿಸಿದ್ದಾರೆ. ಸದ್ಯಕ್ಕೆ ನನಗೆ ಈಗಲೇ ಕೆಲಸ ಬೇಡ, ನಾನಿನ್ನೂ ಶೂಟಿಂಗ್​ನತ್ತ ಗಮನಹರಿಸಬೇಕಿದೆ. ಹೀಗಾಗಿ ನಾನು ತೆಗೆದುಕೊಂಡಿರುವ ನಿರ್ಧಾರಗಳ ವಿರುದ್ಧ ಹೋಗಲು ಬಯಸುವುದಿಲ್ಲ ಎಂದಿದ್ದಾರೆ.

ಉದ್ಯೋಗ ನೀಡುತ್ತಿರುವುದು ಒಳ್ಳೆಯದೇ, ಆದರೆ, ನಾನು ಸದ್ಯಕ್ಕೆ ಆ ಕೆಲಸವನ್ನು ಸ್ವೀಕಾರ ಮಾಡುವುದಿಲ್ಲ. ನಾನು ಶೂಟಿಂಗ್​ ಕಡೆಗೆ ಗಮನ ಹರಿಸಿದ್ದೇನೆ. ನನ್ನ ಕುಟುಂಬವೂ ಕೂಡ ನನಗೆ ಯೋಗ್ಯವಾದ ಕೆಲಸ ಕೊಡಿಸುವಂತೆ ಕೇಳುತ್ತಿದೆ. ಆದರೆ, ನಾನು ಶೂಟಿಂಗ್​ನಲ್ಲಿ ಮುಂದುವರಿಯಲು ಬಯಸಿದ್ದೇನೆ.​ ಹೀಗಾಗಿ ನನ್ನ ನಿಲುವಿಗೆ ವಿರುದ್ಧವಾಗಿ ನಾನು ಹೋಗುವುದಿಲ್ಲ ಎಂದು ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸರಬ್ಜೋತ್ ಹೇಳಿದ್ದಾರೆ.

ನಾನಿನ್ನೂ ನನ್ನ ಮುಖ್ಯ ಗುರಿಯನ್ನು ಸಾಧಿಸಿಲ್ಲ. 2028ರಲ್ಲಿ ಲಾಸ್​ ಏಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬುದೇ ನನ್ನ ಗುರಿಯಾಗಿದೆ. ಈ ಗುರಿಯನ್ನು ಮುಟ್ಟುತ್ತೇನೆ ಎಂಬ ಭರವಸೆ ನನ್ನಲ್ಲಿದೆ. ನಾನು ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕವಾಗಿ ಅತ್ಯುತ್ತಮವಾದದ್ದನ್ನು ನೀಡುತ್ತೇನೆ ಎಂದು ನನ್ನ ವೈಯಕ್ತಿಕ ದಿನಚರಿಯಲ್ಲಿ ಬರೆಯುತ್ತಿದ್ದೆ. ಆದರೆ, ವೈಯಕ್ತಿಕವಾಗಿ ನಾನಿನ್ನೂ ಉತ್ತಮ ಕೊಡುಗೆಯನ್ನು ನೀಡಿಲ್ಲ. ಹೀಗಾಗಿ 2028ರ ಒಲಿಂಪಿಕ್ಸ್​ ಮೇಲೆ ನನ್ನ ಗುರಿಯನ್ನು ಕೇಂದ್ರಿಕರಿಸಿದ್ದೇನೆ ಎಂದು ಇಂಡಿಯಾ ಟುಡೆಗೆ ಸರಬ್ಜೋತ್ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net