ಆಹಾರ ಪೂರೈಕೆ ಗುತ್ತಿಗೆ ಶೆಟ್ಟಿಗಳಿಗೇಕೆ?: ಕ್ಯಾಂಟೀನ್ ಸಿಬ್ಬಂದಿ ಹಲ್ಲೆ ಬಳಿಕ ಶಿವಸೇನಾ MLA ಗಾಯಕ್ವಾಡ್​ ಹೊಸ ವಿವಾದ!

MLA
Published on

Sanjay Gaikwad: ಹಳಸಿದ ಆಹಾರ ನೀಡಿದ್ದಾರೆ ಎಂದು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಒಂದು ದಿನದ ನಂತರ, ಶಿವಸೇನಾ MLA ಸಂಜಯ್ ಗಾಯಕ್ವಾಡ್ ಈಗ ಶೆಟ್ಟಿ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.

"ನನ್ನ ಮೇಲೆ ಆರೋಪ ಮಾಡುವವರಿಗೆ, ಮಹಾರಾಷ್ಟ್ರಕ್ಕೆ ಬಂದು ಸಂಸ್ಕೃತಿಯನ್ನು ಹಾಳು ಮಾಡಿದ ಶೆಟ್ಟಿ ಜನರ ವಿರುದ್ಧ ಅವರು ಏಕೆ ಮಾತನಾಡುವುದಿಲ್ಲ ಎಂದು ನಾನು ಕೇಳುತ್ತೇನೆ". ದಕ್ಷಿಣ ಭಾರತೀಯರು "ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ". ಆದ್ದರಿಂದ ಅವರಿಗೆ ಮಹಾರಾಷ್ಟ್ರದಲ್ಲಿ ಆಹಾರ ಪೂರೈಕೆ ಗುತ್ತಿದೆ ನೀಡಬಾರದು ಎಂದು ಸಂಜಯ್ ಗಾಯಕ್ವಾಡ್ ಅವರು ಗುರುವಾರ ಹೇಳಿದ್ದಾರೆ.

"ಶೆಟ್ಟಿ ಎಂಬ ಗುತ್ತಿಗೆದಾರರಿಗೆ ಏಕೆ ಕಾಂಟ್ರ್ಯಾಕ್ಟ್ ನೀಡಲಾಯಿತು? ಅದನ್ನು ಮರಾಠಿ ವ್ಯಕ್ತಿಗೆ ನೀಡಿ. ನಾವು ಏನು ತಿನ್ನುತ್ತೇವೆ ಎಂದು ಅವರಿಗೆ ಗೊತ್ತಿದೆ ಮತ್ತು ನಮಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಾರೆ. ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಅವರು ನಮ್ಮ ಮಕ್ಕಳನ್ನು ಭ್ರಷ್ಟಗೊಳಿಸಿದ್ದಾರೆ. ಇಂತಹವರು ಉತ್ತಮ ಆಹಾರ ಹೇಗೆ ನೀಡುತ್ತಾರೆ?" ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಶಾಸಕ ಪ್ರಶ್ನಿಸಿದ್ದಾರೆ.

"ನಾನು ಒಬ್ಬ ಮಾಣಿಗೆ ಹೊಡೆದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆ ವ್ಯಕ್ತಿ ಮ್ಯಾನೇಜರ್, ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಅಮಾನತುಗೊಳಿಸಲಾಗಿದೆ. ನನ್ನ ಉದ್ದೇಶ ಒಳ್ಳೆಯದಾಗಿತ್ತು, ಆದರೆ ನನ್ನ ಮಾರ್ಗ ತಪ್ಪಾಗಿತ್ತು" ಎಂದು ಅವರು ಹೇಳಿದರು.

ಈ ಘಟನೆ ನಂತರ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಕ್ಯಾಂಟೀನ್‌ನ ಗುತ್ತಿಗೆದಾರರ ಲೈಸೆನ್ಸ್‌ನ್ನು ಅಮಾನತುಗೊಳಿಸಿದೆ. ಎಫ್‌ಡಿಎ ಅಧಿಕಾರಿಗಳು 16 ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದು, ಇದರಲ್ಲಿ ಗಾಯಕ್ವಾಡ್ ಹಾಳಾಗಿದೆ ಎಂದು ಆರೋಪಿಸಿರುವ ದಾಲ್ ಸೇರಿದೆ. ಇವುಗಳನ್ನು ಬಾಂದ್ರಾದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಪರೀಕ್ಷಾ ಫಲಿತಾಂಶಗಳು ಆಹಾರ ಸುರಕ್ಷಿತವಾಗಿದೆಯೇ ಎಂದು ದೃಢಪಡಿಸುವವರೆಗೆ ಲೈಸೆನ್ಸ್‌ನ್ನು ಅಮಾನತುಗೊಳಿಸಲಾಗಿದೆ. ಎರಡು ವಾರಗಳಲ್ಲಿ ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ.

ಮಂಗಳವಾರ ಸಂಜೆ, "ಹಳಸಿದ" ದಾಲ್ ಮತ್ತು ಅನ್ನವನ್ನು ನೀಡಿದ್ದರಿಂದ ಕೋಪಗೊಂಡ ಸಂಜಯ್ ಗಾಯಕ್ವಾಡ್, ಕೊಲಾಬಾದ ಶಾಸಕರ ಹಾಸ್ಟೆಲ್‌ನ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.

ಗಾಯಕ್ವಾಡ್ ಕ್ಯಾಂಟೀನ್ ಸಿಬ್ಬಂದಿಗೆ ಹೊಡೆಯುತ್ತಿರುವ ವಿಡಿಯೋ ಬುಧವಾರ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net