ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಪಡೆ ಭಾರತಕ್ಕೆ ತಂದಿದ್ದು ಅಸಲಿಯಲ್ಲ ನಕಲಿ ಟ್ರೋಫಿ! ಇಲ್ಲಿದೆ ಅಚ್ಚರಿಯ ಮಾಹಿತಿ

Team India
Published on

ನವದೆಹಲಿ: ಟಿ20 ವಿಶ್ವಕಪ್​ನೊಂದಿಗೆ ನಿನ್ನೆ (ಜುಲೈ 04) ತಾಯ್ನಾಡಿಗೆ ಕಾಲಿಟ್ಟ ಭಾರತ ತಂಡಕ್ಕೆ ಪ್ರತಿ ಹೆಜ್ಜೆಯಲ್ಲೂ ಅದ್ದೂರಿ ಸ್ವಾಗತ ಸಿಕ್ಕಿತು. ವಿಶ್ವಕಪ್ ಹೀರೋಗಳನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ವೆಸ್ಟ್​ಇಂಡೀಸ್​ನ ಬಾರ್ಬಡೋಸ್​​ನಿಂದ ಹೊರಟ ಟೀಮ್​ ಇಂಡಿಯಾ ವಿಮಾನ ನೇರವಾಗಿ ದೆಹಲಿಗೆ ಬಂದಿಳಿಯಿತು. ಬಳಿಕ ರೋಹಿತ್ ಪಡೆ ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ತೆರಳಿತು. ಆಟಗಾರರು ಮೋದಿ ಅವರೊಂದಿಗೆ ಉಪಹಾರ ಸೇವಿಸಿ ವಿಶ್ವಕಪ್‌ನ ವೈಶಿಷ್ಟ್ಯಗಳನ್ನು ಹಂಚಿಕೊಂಡರು.

ನಾಯಕ ರೋಹಿತ್ ಶರ್ಮ, ಉಪನಾಯಕ ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಮೋದಿ ಕೆಲಕಾಲ ಮಾತುಕತೆ ನಡೆಸಿದರು. ಆ ಬಳಿಕ ಭಾರತ ತಂಡ ಮುಂಬೈಗೆ ತೆರಳಿರು. ಮುಂಬೈ ವಿಮಾನ ನಿಲ್ದಾಣದಲ್ಲಿಯೂ ಟೀಮ್​ ಇಂಡಿಯಾಗೆ ಭವ್ಯ ಸ್ವಾಗತ ಸಿಕ್ಕಿತು. ವಿಮಾನ ನಿಲ್ದಾಣದ ಅಧಿಕಾರಿಗಳು ಅಗ್ನಿಶಾಮಕ ವಾಹನಗಳ ಮೂಲಕ ಜಲ ನಮನ ಸಲ್ಲಿಸಿದರು.

ಭಾರತೀಯ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂ ತಲುಪಿದರು. ವಾಂಖೆಡೆ ಸ್ಟೇಡಿಯಂ ಬಳಿ ತೆರೆದ ಬಸ್​ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಇದನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಮುಂಬೈ ಬೀದಿಗಳಲ್ಲಿ ಬೀಡುಬಿಟ್ಟಿದ್ದರು. ಟೀಮ್​ ಇಂಡಿಯಾ ಆಗಮನದಿಂದ ಮುಂಬೈನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.

ಇದೆಲ್ಲದರ ನಡುವೆ ಟೀಮ್​ ಇಂಡಿಯಾಗೆ ಸಂಬಂಧಿಸಿದ ವಿಷಯವೊಂದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವು ದೇಶಗಳು ಮುಖಾಮುಖಿಯಾಗಿದ್ದ ಮೆಗಾಟೂರ್ನಮೆಂಟ್‌ನಲ್ಲಿ ಪ್ರತಿ ಪಂದ್ಯವನ್ನೂ ಗೆದ್ದ ಟೀಮ್​ ಇಂಡಿಯಾ, ಅಂತಿಮ ಹೋರಾಟದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಆಗಿ ಕಪ್ ಅನ್ನು ಹೆಮ್ಮೆಯಿಂದ ಸ್ವೀಕರಿಸಿದೆ. ಆದರೆ ರೋಹಿತ್ ಪಡೆ ಬಳಿಯಿರುವುದು ಮೂಲ ಟ್ರೋಫಿ ಅಲ್ಲ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಕಪ್‌ನಲ್ಲಿ ಚಾಂಪಿಯನ್​ ಎನಿಸಿಕೊಂಡಿರುವ ಭಾರತದ ಬಳಿ ಇರುವುದು ಡುಪ್ಲಿಕೇಟ್ ಟ್ರೋಫಿ ಎಂದು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ನಕಲಿ ಕಪ್‌ಗಾಗಿ ಇಷ್ಟೊಂದು ಹೋರಾಡಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್​ ಇದೆ. ಅದನ್ನು ಕೇಳಿದರೆ ಆಶ್ಚರ್ಯ ಪಡುತ್ತೀರಿ. ಅದೇನೆಂದರೆ, ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ವಿಜೇತ ತಂಡವು ಅದನ್ನು ಮನೆಗೆ ಕೊಂಡೊಯ್ಯುತ್ತದೆ.

ಹಾಗಾದರೆ, ನಿಜವಾದ ಟ್ರೋಫಿ ಎಲ್ಲಿದೆ? ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿದೆ. ಫೋಟೋಶೂಟ್​ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಯಲ್ಲಿ ಇಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್​ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ಮನೆಗೆ ಹಿಂದಿರುಗುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net