

ನವದೆಹಲಿ: ದೇಶಕ್ಕೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದು ಕೊಟ್ಟ ಟೀಮ್ ಇಂಡಿಯಾದ ಆಟಗಾರರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಕಬ್ಬಿಣದ ಕಡಲೆಯಾಗಿದ್ದ ವಿಶ್ವಕಪ್ ಈ ಬಾರಿ ಭಾರತದ ವಶವಾಗಿದೆ. ಹೀಗಾಗಿ ಇಡೀ ದೇಶವ ಟೀಮ್ ಇಂಡಿಯಾಗೆ ಪ್ರಶಂಸೆಯ ಸುರಿಮಳೆಗೈಯುತ್ತಿದೆ. ತಂಡವನ್ನು ಮುನ್ನಡೆಸಿದ ನಾಯಕ ರೋಹಿತ್ ಶರ್ಮ ಮತ್ತು ತೆರೆಮರೆಯಲ್ಲಿ ತಂಡವನ್ನು ಮುನ್ನಡೆಸಿದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭಿಮಾನಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇವರಲ್ಲದೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ಆಟಗಾರರು, ಕೋಚಿಂಗ್ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ಸದ್ಯ ಟೀಮ್ ಇಂಡಿಯಾ ಕಪ್ನೊಂದಿಗೆ ತವರಿಗೆ ಮರಳಿದೆ.
ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ವಿಶ್ವಕಪ್ ಗೆಲ್ಲುವಲ್ಲಿ ಅವರ ಕೊಡುಗೆ ಏನು ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಬುಮ್ರಾ ತಂಡದಲ್ಲಿದ್ದರೆ ಏನು ಬೇಕಾದರೂ ಸಾಧ್ಯ ಎನ್ನುತ್ತಾರೆ.
ಬುಮ್ರಾ ಅವರಂತಹ ಅದ್ಭುತ ಆಟಗಾರರು ಟೀಮ್ ಇಂಡಿಯಾಗೆ ಬರಬೇಕು ಎಂಬ ಕಾಮೆಂಟ್ಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಬುಮ್ರಾರನ್ನು ಹೊಗಳಿದರು. ಬುಮ್ರಾ ಅವರು ಕೊಹಿನೂರ್ ವಜ್ರಕ್ಕಿಂತ ಹೆಚ್ಚು ಮೌಲ್ಯವನ್ನು ಹೊಂದಿದ್ದಾರೆ ಎಂದು ಕಾರ್ತಿಕ್ ಬಣ್ಣಿಸಿದರು. ಅವರೊಬ್ಬ ಅದ್ಭುತ ಬೌಲರ್ ಎಂದು ಮೆಚ್ಚುಗೆ ಮಹಾಪೂರ ಹರಿಸಿದರು.
ಜಸ್ಪ್ರೀತ್ ಬುಮ್ರಾ ಕೋಹಿನೂರ್ ವಜ್ರಕ್ಕಿಂತ ಹೆಚ್ಚು ಮೌಲ್ಯವನ್ನು ಹೊಂದಿದ್ದಾರೆ. ಪ್ರಸ್ತುತ ವಿಶ್ವ ಕ್ರಿಕೆಟ್ನ ಎಲ್ಲ ಸ್ವರೂಪಗಳಲ್ಲಿ ಅವರು ಶ್ರೇಷ್ಠ ಬೌಲರ್. ಬುಮ್ರಾ ಅವರಿಗಿಂತ ಉತ್ತಮರು ಯಾರೂ ಇಲ್ಲ. ಒತ್ತಡದಲ್ಲಿ ಈ ರೀತಿ ಬೌಲಿಂಗ್ ಮಾಡುವುದು ಸಾಮಾನ್ಯವಲ್ಲ. ಪ್ರತಿ ಬಾರಿಯೂ ತಂಡ ಒತ್ತಡದಲ್ಲಿದ್ದಾಗ ಬಂದು ಉತ್ತಮ ಪ್ರದರ್ಶನ ನೀಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಕ್ರಿಕೆಟ್ನಲ್ಲಿ ಕೆಲವೇ ಆಟಗಾರರು ಇದನ್ನು ಮಾಡಬಹುದು. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿಯೂ ಬುನ್ರಾ ಮೇಲುಗೈ ಸಾಧಿಸುತ್ತಾರೆ. ಪ್ರತಿಯೊಬ್ಬ ನಾಯಕನೂ ತಮ್ಮ ತಂಡದಲ್ಲಿ ಬುಮ್ರಾ ಅವರಂತಹ ಬೌಲರ್ಗಳನ್ನು ಬಯಸುತ್ತಾರೆ. ಆದರೆ, ಇದು ಎಲ್ಲರಿಗೂ ಸಾಧ್ಯವಿಲ್ಲ ಎಂದು ಕಾರ್ತಿಕ್ ಹೇಳಿದರು.
ಅಂದಹಾಗೆ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ನಲ್ಲಿ ಬುಮ್ರಾ 8 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಪಡೆದರು. ಅವರ ಎಕನಾಮಿ 4.17 ಇದೆ. ಇದರಿಂದಲೇ ಅವರ ಬೌಲಿಂಗ್ನ ಸಾಮರ್ಥ್ಯವನ್ನು ನಾವು ಅರ್ಥಮಾಡಿಕೊಳ್ಳಬಹುದು. ಕೊಹಿನೂರ್ಗಿಂತ ಬುಮ್ರಾ ಹೆಚ್ಚು ಮೌಲ್ಯಯುತ ಎಂಬ ದಿನೇಶ್ ಕಾರ್ತಿಕ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)