ನೀವಿದನ್ನು ಗಮನಿಸಿದ್ರಾ? ವಿಶ್ವಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು! ಫ್ಯಾನ್ಸ್​ ಬೇಸರ

Hardik Pandya
Published on

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ಇಂಡೀಸ್​ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್​ನಲ್ಲಿ ಅಜೇಯ ಗೆಲುವಿನೊಂದಿಗೆ​ ಟೀಮ್​ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.​ 13 ವರ್ಷಗಳ ಕಾಯುವಿಕೆಯ ನಂತರ ಟೀಮ್​ ಇಂಡಿಯಾ ತನ್ನ ವಿಶ್ವಕಪ್ ಕನಸನ್ನು ನನಸಾಗಿಸಿಕೊಂಡಿದೆ.

ಜೂನ್​ 29ರಂದು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ವಿಶ್ವಕಪ್​ಗೆ ಮುತ್ತಿಕ್ಕಿದೆ. ಈ ಸ್ಮರಣೀಯ ಗೆಲುವಿನಿಂದ ಎಲ್ಲ ಆಟಗಾರರು ಮೈದಾನದಲ್ಲಿ ಭಾವುಕರಾದರು ಮತ್ತು ಯಶಸ್ಸನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡರು. ಬಹುತೇಕ ಎಲ್ಲ ಆಟಗಾರರು ತಮ್ಮ ಕುಟುಂಬದೊಂದಿಗೆ ಭಾವನಾತ್ಮಕವಾಗಿ ಸಂಭ್ರಮಿಸಿದರು. ಆದರೆ ಒಬ್ಬ ಆಟಗಾರ ಮಾತ್ರ ತನ್ನ ಗೆಲುವನ್ನು ಏಕಾಂಗಿಯಾಗಿ ಆಚರಿಸಿದರು. ಆ ವಿಡಿಯೋ ಈಗ ವೈರಲ್ ಆಗಿದೆ. ಆ ಆಟಗಾರ ಯಾರು ಎಂಬುದನ್ನು ನಾವೀಗ ತಿಳಿಯೋಣ.

ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದ ನಂತರ ಆಟಗಾರರು ತಮ್ಮ ಕುಟುಂಬದೊಂದಿಗೆ ಸಂತಸ ಹಂಚಿಕೊಂಡರು. ರೋಹಿತ್ ಶರ್ಮ ತಮ್ಮ ಪತ್ನಿ ರಿತಿಕಾ ಅವರೊಂದಿಗೆ ಯಶಸ್ಸನ್ನು ಹಂಚಿಕೊಂಡರೆ, ಜಡೇಜಾ, ಬುಮ್ರಾ, ವಿರಾಟ್ ಕೊಹ್ಲಿ ಮತ್ತು ಇತರ ಕೆಲವು ಆಟಗಾರರು ತಮ್ಮ ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಗೊತ್ತೇ ಇದೆ. ಆದರೆ, ಇದರಲ್ಲಿ ಒಂದು ಸಂಗತಿಯನ್ನು ನೀವು ಗಮನಿಸಿದ್ದೀರಾ? ಏನದು ಅಂದರೆ, ಭಾರತದ ಎಲ್ಲ ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರೆ, ಟೀಮ್​ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾತ್ರ ಏಕಾಂಗಿಯಾಗಿ ಗೆಲುವನ್ನು ಸಂಭ್ರಮಿಸಿದರು. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು ಎಂದು ಬೇಸರ ಹೊರಹಾಕುತ್ತಿದ್ದಾರೆ. ಅಲ್ಲದೆ, ನತಾಶಾ ವಿರುದ್ಧ ಕಿಡಿಕಾರುತ್ತಿದ್ದಾರೆ.

ಹಾರ್ದಿಕ್​ ಪಾಂಡ್ಯ ಅವರು ತ್ರಿವರ್ಣ ಧ್ವಜದೊಂದಿಗೆ ಗೆಲುವನ್ನು ಆಚರಿಸಿದರು. ಹಾರ್ದಿಕ್ ಪತ್ನಿ ನತಾಶಾ ಸ್ಟಾಂಕೋವಿಕ್ ಫೈನಲ್ ಪಂದ್ಯಕ್ಕೆ ಬಾರದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ, ಕೆಲ ದಿನಗಳ ಹಿಂದೆ ಇವರಿಬ್ಬರು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು ಗೊತ್ತೇ ಇದೆ. ಆದರೆ, ಈ ಸುದ್ದಿಗೆ ಈವರೆಗೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಪಾಂಡ್ಯ-ನತಾಶಾ ಬ್ರೇಕ್ ಅಪ್ ಸುದ್ದಿ ಚರ್ಚೆಯಾಗುತ್ತಲೇ ಇದೆ. ಅಲ್ಲದೆ, ಇಬ್ಬರ ನಡೆ ಕೂಡ ಅನುಮಾನ ಹುಟ್ಟಿಸುವಂತಿದೆ.

ಪಂದ್ಯ ಮುಗಿದ ಬಳಿಕ ಹಾರ್ದಿಕ್​ ಮೈದಾನದಲ್ಲೇ ವಿಡಿಯೋ ಕಾಲ್​ನಲ್ಲಿ ಮಾತನಾಡಿದರು. ಆದರೆ, ಆ ವಿಡಿಯೋ ಕಾಲ್​ ಮಾಡಿದ್ದು ಯಾರು ಎಂಬುದು ಬಹಿರಂಗವಾಗಿಲ್ಲ. ನತಾಶಾ ಅವರು ಹಾರ್ದಿಕ್​ರಿಂದ ಅಂತರ ಕಾಯ್ದುಕೊಂಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ವಿಶ್ವಕಪ್​ ಗೆದ್ದ ಬಳಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಮೈದಾನದಲ್ಲಿ ಓಡಾಡುವ ಮೂಲಕ ಹಾರ್ದಿಕ್​ ಗೆಲುವನ್ನು ಸಂಭ್ರಮಿಸಿದರು. ಅಲ್ಲದೆ, ಐಪಿಎಲ್​ ವೇಳೆ ತನ್ನನ್ನು ಟ್ರೋಲ್​ ಮಾಡಿದ್ದನ್ನು ನೆನೆದು ಕಣ್ಣೀರು ಸಹ ಹಾಕಿದರು. ಆದರೆ, ಟ್ರೋಲ್​ ಮಾಡಿದವರಿಗೆ ಹಾರ್ದಿಕ್​ ವಿಶ್ವಕಪ್​ನಲ್ಲಿ ಉತ್ತರ ನೀಡುವ ಮೂಲಕ ನಾನು ಝೀರೋ ಅಲ್ಲ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net