ಟೀಮ್​​​ ಇಂಡಿಯಾ ಪಾಕಿಸ್ತಾನಕ್ಕೆ ಬಂದರೆ… ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ನಾಯಕ ಸಲ್ಮಾನ್​ ಬಟ್

Salman butt
Published on

ನವದೆಹಲಿ: ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ ಟೀಮ್​ ಇಂಡಿಯಾ ಹೊಸ ಉತ್ಸಾಹದಲ್ಲಿದೆ. 13 ವರ್ಷಗಳಿಂದ ಕಬ್ಬಿಣದ ಕಡಲೆಯಾಗಿದ್ದ ಕಪ್​ ಕೈಗೆ ಸಿಗುತ್ತಿದ್ದಂತೆ ಭಾರತೀಯ ಸಂಭ್ರಮ ಮುಗಿಲು ಮುಟ್ಟಿದೆ. ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರಂತಹ ದಿಗ್ಗಜರು ಕಪ್ ಕನಸನ್ನು ನನಸು ಮಾಡಿದ್ದು, ಇಡೀ ದೇಶವೇ ಟೀಮ್​ ಇಂಡಿಯಾ ಬಗ್ಗೆ ತುಂಬಾ ಹೆಮ್ಮೆ ಪಡೆಯುತ್ತಿದೆ.

ಕಿರು ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ರಸ್ತೆಗೆ ಬಂದು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಅಲ್ಲದೆ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಇನ್ನು ಮುಂದೆ ಎಲ್ಲ ಟೂರ್ನಮೆಂಟ್​ಗಳಲ್ಲಿ ಇದೇ ವೇಗವನ್ನು ಮುಂದುವರಿಸಿ ಶ್ರೇಷ್ಠ ಚಾಂಪಿಯನ್ ಆಗಬೇಕು ಎಂದು ಅಭಿಮಾನಿಗಳು ಬಯಸಿದ್ದಾರೆ.

ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇದೀಗ ಏಕದಿನ ಮತ್ತು ಟೆಸ್ಟ್‌ಗಳತ್ತ ಸಂಪೂರ್ಣ ಗಮನ ಹರಿಸಲಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್​ಗೆ ಹೋಗಿ ಕಪ್​ ಕಳೆದುಕೊಂಡು ಟೀಮ್​ ಇಂಡಿಯಾ ನಿರಾಸೆ ಅನುಭವಿಸಿತು. ಇದೀಗ ಅದೇ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯನ್ನು ಬಿಟ್ಟುಕೊಡದಿರಲು ಬಯಸಿದೆ. ಇದೇ ವೇಳೆ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಬರಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಟೀಮ್ ಇಂಡಿಯಾ ಇತರ ದೇಶಗಳಂತೆ ಒಂದು ಕ್ರಿಕೆಟ್ ರಾಷ್ಟ್ರವಾಗಿದೆ. ಈ ನಿಟ್ಟಿನಲ್ಲಿ ಐಸಿಸಿ ಏನು ಮಾಡುತ್ತಿದೆ ಎಂಬುದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಟ್ ಹೇಳಿದ್ದಾರೆ.

ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ-2025 ಅನ್ನು ಆಯೋಜಿಸುತ್ತಿದೆ. ಆದರೆ ಆ ದೇಶದ ಜತೆಗಿನ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ಭಾರತ ಆ ಟೂರ್ನಿಗೆ ಹೋಗುವುದು ಕಷ್ಟ. ಟೀಮ್​ ಇಂಡಿಯಾ ಆಡಲಿರುವ ಪಂದ್ಯಗಳನ್ನು ಪಾಕಿಸ್ತಾನದಿಂದ ದುಬೈ ಅಥವಾ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಿಸಿಸಿ, ಐಸಿಸಿಗೆ ಮನವಿ ಮಾಡಿದೆ ಎಂಬ ವರದಿಗಳು ಈ ಹಿಂದೆ ಪ್ರಕಟವಾದವು. ಈ ಹಿನ್ನೆಲೆಯಲ್ಲಿ ಸಲ್ಮಾನ್ ಬಟ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

ಭಾರತ ಸೇರಿದಂತೆ ಎಲ್ಲಾ ತಂಡಗಳು ಪಾಕಿಸ್ತಾನಕ್ಕೆ ಬರುವಂತೆ ನೋಡಿಕೊಳ್ಳುವುದು ಐಸಿಸಿಯ ಜವಾಬ್ದಾರಿಯಾಗಿದೆ ಎಂದು ಬಟ್ ಹೇಳಿದರು. ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಟೂರ್ನಿಗೆ ಬಂದರೆ ಸ್ವಾಗತಿಸುತ್ತೇವೆ, ಬರದಿದ್ದರೆ ಐಸಿಸಿಗೆ ಬಿಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ದೇಶಗಳದ್ದೇ ಒಂದು ರೀತಿ ಆದರೆ, ಭಾರತದ್ದೇ ಬೇರೆಯಾಗಿದೆ. ಭಾರತದ ವಿರುದ್ಧ ಐಸಿಸಿ ತೆಗೆದುಕೊಳ್ಳುವ ನಿಲುವಿನಿಂದ ಭಾರತದ ಬಗೆಗಿನ ಐಸಿಸಿ ಧೋರಣೆ ಹೊರಬರಲಿದೆ ಎಂದು ಸಲ್ಮಾನ್​ ಬಟ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net