ನೀವಿನ್ನೂ ಯಾಕೆ ಮದುವೆ ಆಗಿಲ್ಲ? ನಟಿ ರೆಜಿನಾ ಕ್ಯಾಸ್ಸಂದ್ರ ಕೊಟ್ಟ ಬೋಲ್ಡ್​ ಉತ್ತರ ವೈರಲ್​! Regina Cassandra

Regina Cassandra
Published on

Regina Cassandra ​: ನಟ ಚೇತನ್​ ಅಭಿನಯದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್​ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಬೋಲ್ಡ್​ ಆಗಿ ಮಾತನಾಡುವ ಮೂಲಕ ಆಗಾಗ ವಿವಾದಕ್ಕೂ ಗುರಿಯಾಗುತ್ತಿರುತ್ತಾರೆ.

ರೆಜಿನಾ ಅವರು ತೆಲುಗು, ತಮಿಳು ಮಾತ್ರವಲ್ಲದೆ, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಸರು ಪಡೆದುಕೊಂಡಿದ್ದಾರೆ. ನಾಯಕಿಯಾಗಿ ಮಾತ್ರವಲ್ಲದೆ, ಅನೇಕ ಸಿನಿಮಾಗಳಲ್ಲಿ ಐಟಂ ಸಾಂಗ್​ಗಳಲ್ಲಿ ಸೊಂಟ ಬಳಕಿಸುವ ಮೂಲಕ ತಾನೊಬ್ಬ ಒಳ್ಳೆಯ ಡಾನ್ಸರ್​ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ.

ರೆಜಿನಾ ಮದ್ರಾಸ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಮತ್ತು ಕೌನ್ಸೆಲಿಂಗ್ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಯಸ್ಸು 34 ವರ್ಷ ಆದ್ರೂ ರೆಜಿನಾ ಅವರ ಇನ್ನೂ ಮದುವೆಯಾಗಿಲ್ಲ. ಹೀಗಾಗಿ, ಅವರು ಎಲ್ಲೇ ಹೋದರು ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ ಏನೆಂದರೆ, ಮದುವೆ ಯಾವಾಗ ಎಂಬುದು. ಇದೀಗ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ನಾನೊಬ್ಬ ಪ್ರಣಯಪ್ರಿಯಳು ಆದರೆ, ನನ್ನ ಮುಖ್ಯ ಗಮನ ನನ್ನ ವೃತ್ತಿಜೀವನದ ಮೇಲೆ. ನನ್ನ ಜೀವನದಲ್ಲಿ ಎಲ್ಲವೂ ಸ್ವಾಭಾವಿಕವಾಗಿ ನಡೆಯಬೇಕೆಂದು ನಾನು ಬಯಸುತ್ತೇನೆ ಎಂದು ನಟಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ನನ್ನ ತಾಯಿ ಕೂಡ ನನ್ನನ್ನು ಯಾವಾಗ ಮದುವೆಯಾಗುತ್ತೀಯ ಅಂತ ಎಂದಿಗೂ ಕೇಳುವುದಿಲ್ಲ. ನನ್ನನ್ನು ಯಾರಾದರೂ ಮದುವೆಯ ಬಗ್ಗೆ ಪ್ರಶ್ನಿಸಿದರೆ, ನನ್ನ ತಾಯಿಯೇ ಎಂದಿಗೂ ಈ ಬಗ್ಗೆ ಕೇಳುವುದಿಲ್ಲ, ನೀನು ಯಾಕೆ ಕೇಳುತ್ತಿದ್ದೀಯ, ನಿನಗೆ ಏನಾಗಿದೆ? ಎಂದು ಅವರನ್ನೇ ಕೇಳುತ್ತೇನೆ ಎಂದಿದ್ದಾರೆ ರೆಜಿನಾ.

ಇದೇ ವೇಳೆ ತನ್ನ ಹಿಂದಿನ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ರೆಜಿನಾ, ನಾನು 'ಸೀರಿಯಲ್ ಡೇಟರ್' ಎಂದು ನಾನೇ ಹೇಳಿಕೊಂಡಿದ್ದೇನೆ. ಆದರೆ ಈಗ ಮದುವೆ ನನಗೆ ಆದ್ಯತೆಯಲ್ಲ. ನಟಿಯಾಗಿ, ಜನರು ನನ್ನ ವೈಯಕ್ತಿಕ ಜೀವನದ ಬಗ್ಗೆ ಆಗಾಗ ತಪ್ಪು ಕಲ್ಪನೆಗಳನ್ನು ಹೊಂದಿರುತ್ತಾರೆ. ನನ್ನ ಜೀವನವು ನನ್ನದೇ ಆದ ರೀತಿಯಲ್ಲಿ ಸಾಗಬೇಕೆಂದು ನಾನು ಬಯಸುತ್ತೇನೆ ಎಂದು ರೆಜಿನಾ ಹೇಳಿದರು.

ರೆಜಿನಾ ತನ್ನ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. 2020ರಲ್ಲಿ ಚೆನ್ನೈನಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಾ, ನನಗೆ ಹಲವು ಬಾರಿ ಅಂತಹ ಅನುಭವಗಳಾಗಿವೆ. ಮೊದಲಿಗೆ ನಾನು ಅಂತಹ ವಿಷಯಗಳಿಗೆ ಪ್ರತಿಕ್ರಿಯಿಸಲು ದುರ್ಬಲಳಾಗಿದ್ದೆ ಆದರೆ, ನಂತರ ನಾನು ಅಂತಹ ಅನುಭವಗಳನ್ನು ಎದುರಿಸಲು ಬಲಶಾಲಿಯಾದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net