ಮಾರ್ಗ ಮಧ್ಯೆ ಸಡಿಲಗೊಂಡ ವಿಮಾನದ ಕಿಟಕಿ: ಆತಂಕಗೊಂಡ ಪ್ರಯಾಣಿಕರು, ವಿಮಾನಯಾನ ಸಂಸ್ಥೆ ಹೇಳಿದ್ದಿಷ್ಟು... SpiceJet aircraft ​

SpiceJet aircraft
Published on

SpiceJet aircraft : ಗೋವಾ ಮತ್ತು ಪುಣೆ ನಡುವೆ ಸಂಚರಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕಿಟಕಿ ಮಾರ್ಗ ಮಧ್ಯೆ ಸಡಿಲಗೊಂಡು ಪ್ರಯಾಣಿಕರನ್ನು ಆತಂಕಕ್ಕೆ ದೂಡಿತು. ಆದರೆ, ಯಾವುದೇ ತೊಂದರೆ ಇಲ್ಲ ಎಂದು ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಧೈರ್ಯ ತುಂಬಿದ ಪ್ರಸಂಗ ಜರುಗಿದೆ. ಕಿಟಕಿ ಸಡಿಲಗೊಂಡಿದ್ದರು ಸಹ ಕ್ಯಾಬಿನ್ ಒತ್ತಡ ಸಾಮಾನ್ಯವಾಗಿತ್ತು ಮತ್ತು ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಬುಧವಾರ (ಜೂನ್​ 02) ತಿಳಿಸಿದೆ.

ಮಂಗಳವಾರ (ಜೂನ್​ 01) SG1080 ವಿಮಾನ ಗೋವಾದಿಂದ ಪುಣೆಗೆ ತೆರಳುತ್ತಿತ್ತು. ಈ ವೇಳೆ ವಿಮಾನದ ಕಿಟಕಿಯ ಚೌಕಟ್ಟು ಬಹುತೇಕ ಹೊರಬರುವ ಹಂತದಲ್ಲಿತ್ತು. ಇದರಿಂದಾಗಿ ಪ್ರಯಾಣಿಕರು ಆತಂಕಗೊಂಡಿದ್ದರು. ವಿಮಾನ ಹಾರಾಟದಲ್ಲಿದ್ದಾಗ ಸಡಿಲಗೊಂಡ ಕಿಟಕಿ ಚೌಕಟ್ಟನ್ನು ಪ್ರಯಾಣಿಕನೊಬ್ಬ ತಮ್ಮ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಮಾನದ ಕಿಟಕಿ ಕಳಚಿ ಬೀಳುತ್ತಿರುವ ವಿಡಿಯೋವನ್ನು ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಯಾಣಿಕನೊಬ್ಬ, ವಿಮಾನದ ಹಾರಾಟದ ಯೋಗ್ಯತೆಯನ್ನು ಪ್ರಶ್ನಿಸಿದ್ದ. ಇಂದು (ಮಂಗಳವಾರ) ಗೋವಾದಿಂದ ಪುಣೆಗೆ ಬಂದ ಸ್ಪೈಸ್‌ಜೆಟ್ ವಿಮಾನ ಹಾರಾಟದ ಮಧ್ಯದಲ್ಲಿ ಇಡೀ ಒಳಗಿನ ಕಿಟಕಿ ಜೋಡಣೆ ಬಿದ್ದುಹೋಯಿತು. ಈಗ ಈ ವಿಮಾನವು ಟೇಕ್ ಆಫ್ ಆಗಿ ಜೈಪುರಕ್ಕೆ ಹೋಗಲಿದೆ. ಇದು ಹಾರಾಟಕ್ಕೆ ಯೋಗ್ಯವಾಗಿದೆಯೇ ಎಂದು ಆಶ್ಚರ್ಯ ಪಡುತ್ತೇನೆ ಎಂದು ವಾಯುಯಾನ ಸುರಕ್ಷತಾ ನಿಯಂತ್ರಕ DGCA ಗೆ ಟ್ಯಾಗ್ ಮಾಡಿ ಪ್ರಯಾಣಿಕ ಪ್ರಶ್ನೆ ಮಾಡಿದ್ದ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪೈಸ್‌ಜೆಟ್, ಹೊರಗಡೆ ಬಂದಿದ್ದ ಭಾಗವು ರಚನಾತ್ಮಕವಲ್ಲದ ಟ್ರಿಮ್ ಘಟಕವಾಗಿದ್ದು, ನೆರಳಿನ ಉದ್ದೇಶಕ್ಕಾಗಿ ಕಿಟಕಿಯ ಮೇಲೆ ಅಳವಡಿಸಲಾಗಿತ್ತು ಮತ್ತು ವಿಮಾನದ ಸುರಕ್ಷತೆ ಅಥವಾ ಸಮಗ್ರತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ತಂದಿಲ್ಲ. ವಿಮಾನ ಪ್ರಯಾಣದ ಉದ್ದಕ್ಕೂ ಕ್ಯಾಬಿನ್ ಒತ್ತಡವು ಸಾಮಾನ್ಯವಾಗಿತ್ತು ಮತ್ತು ಪ್ರಯಾಣಿಕರ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ವಿಮಾನವು ಪುಣೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದ ಬೆನ್ನಲ್ಲೇ ಕಿಟಕಿ ಚೌಕಟ್ಟನ್ನು ಸರಿಪಡಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Q400 ವಿಮಾನವು ಬಲವಾದ, ಒತ್ತಡವನ್ನು ಹೊಂದಿರುವ ಹೊರ ಫಲಕವನ್ನು ಒಳಗೊಂಡಂತೆ, ಬಹು ಪದರಗಳ ಕಿಟಕಿ ಫಲಕಗಳನ್ನು ಹೊಂದಿದ್ದು, ಪ್ರಯಾಣಿಕರ ಸುರಕ್ಷತೆಯು ಎಂದಿಗೂ ಅಪಾಯಕ್ಕೆ ಸಿಲುಕುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಮೇಲ್ಮೈ ಅಥವಾ ಕಾಸ್ಮೆಟಿಕ್​ ಘಟಕವು ಸಡಿಲಗೊಳ್ಳುವ ಸಾಧ್ಯತೆಯಿಲ್ಲದಿದ್ದರೂ ಸಹ ಮುಂದಿನ ನಿಲ್ದಾಣದಲ್ಲಿ ಇಳಿಯುವಾಗ, ಪ್ರಮಾಣಿತ ನಿರ್ವಹಣಾ ಕಾರ್ಯವಿಧಾನಗಳಿಗೆ ಅನುಗುಣವಾಗಿ ಅದನ್ನು ಸರಿಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net