ದಿನದಿಂದ ದಿನಕ್ಕೆ ಇಷ್ಟೊಂದು ದುಬಾರಿ ಏಕೆ? ದಾಖಲೆ ಮಟ್ಟಿಗಿನ ಏರಿಕೆಗೆ ಕಾರಣವೇನು? ಹೀಗಿದೆ ತಜ್ಞರ ಮಾತು | Gold

Today Gold Rate
Published on

ನವದೆಹಲಿ: ಪ್ರಸ್ತುತ, ಚಿನ್ನ (Gold ) ಮಾತ್ರವಲ್ಲ ಬೆಳ್ಳಿ ಕೊಳ್ಳುವುದು ಕೂಡ ದೂರದ ಮಾತು. ಇನ್ನೊಂದು ರೀತಿ ಹೇಳುವುದಾದರೆ ಕಷ್ಟಸಾಧ್ಯ. ಈಗಾಗಲೇ 1.30 ಲಕ್ಷ ರೂ.ನತ್ತ ಸಾಗಿರುವ ಗೋಲ್ಡ್​ ಬೆಲೆ, ಇನ್ನು ಕೆಲವೇ ತಿಂಗಳಲ್ಲಿ 2 ಲಕ್ಷ ರೂ. ದಾಟಿ ಹೋದರೂ ಅಚ್ಚರಿಯಲ್ಲ. ಮತ್ತೊಂದೆಡೆ, ಬೆಳ್ಳಿ ಬೆಲೆಯೂ ಸಾರ್ವಕಾಲಿಕ ದಾಖಲೆ ತಲುಪಿದ್ದು, ಒಂದು ಕೆಜಿಗೆ 1.93 ಲಕ್ಷ ರೂ. ಆಗಿ ಹೋಗಿದೆ. ಈ ಏರಿಕೆಯಿಂದ ಅಕ್ಷರಶಃ ಕಂಗಾಲಾಗಿರುವ ಗ್ರಾಹಕರು, ಹಿಂದೆಂದೂ ಇಷ್ಟೊಂದು ದುಬಾರಿ ಆಗದ ಚಿನ್ನ ಈ ವರ್ಷವೇ ಏಕೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ತಜ್ಞರು ಹೇಳಿದ್ದೇನು? ಹೀಗಿದೆ ನೋಡಿ ಉತ್ತರ.

gold rate

2025ರಲ್ಲಿ ಚಿನ್ನವು ಶೇ.50ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. 2022ಕ್ಕೆ ಹೋಲಿಸಿದರೆ ಇದು ಶೇ.140ರಷ್ಟು ಹೆಚ್ಚಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮತ್ತು ಹಣಕಾಸು ನೀತಿ ಬದಲಾವಣೆಗಳು ಗೋಲ್ಡ್​ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಕೇಂದ್ರ ಬ್ಯಾಂಕ್‌ಗಳ ಬೃಹತ್ ಖರೀದಿಗಳು, ಇಟಿಎಫ್‌ಗಳಲ್ಲಿ ಹೂಡಿಕೆಗಳು ಮತ್ತು ಬಡ್ಡಿದರ ಕಡಿತದ ನಿರೀಕ್ಷೆಗಳು ಚಿನ್ನದ ಮೇಲಿನ ಉತ್ಸಾಹವನ್ನು ಹೆಚ್ಚಿಸುತ್ತಿವೆ. ಫಿಯೆಟ್ ಕರೆನ್ಸಿಗಳಲ್ಲಿನ ವಿಶ್ವಾಸದಲ್ಲಿನ ಕುಸಿತವೂ ಇದಕ್ಕೆ ಒಂದು ಕಾರಣ ಎನ್ನಲಾಗಿದೆ.

ತಜ್ಞರ ಹೇಳಿಕೆಯ ಪ್ರಕಾರ, 2026ರ ಆರಂಭದೊಳಗೆ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 1,50,000 ರೂ. ಗಡಿಯನ್ನು ದಾಟಬಹುದು ಎಂದಿದ್ದಾರೆ. ಆದಾಗ್ಯೂ, ಕರೆನ್ಸಿ ಬಿಕ್ಕಟ್ಟು ಅಥವಾ ತೀವ್ರ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಮಾತ್ರ ಈ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಹೇಳಲಾಗಿದೆ.

ದಾಖಲೆ ಮಟ್ಟಿಗಿನ ಏರಿಕೆ ಏಕೆ?

ಜಾಗತಿಕ ಆರ್ಥಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕ್ರಮೇಣ ಏರಿಕೆಗೆ ಕಾರಣ. ಜಾಗತಿಕ ಪರಿಸ್ಥಿತಿಗಳು ಅಸ್ತವ್ಯಸ್ತವಾಗಿರುವಾಗ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಆಯ್ಕೆ ಮಾಡುತ್ತಾರೆ.

ಕೇಂದ್ರ ಬ್ಯಾಂಕ್ ಖರೀದಿಗಳು: ದೇಶಗಳು ತಮ್ಮ ಚಿನ್ನದ ಮೀಸಲು ಹೆಚ್ಚಿಸುತ್ತಿವೆ ಮತ್ತು ಯುಎಸ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತಿವೆ. ಇದು ಚಿನ್ನದ ಬೆಲೆಗಳಿಗೆ ಪ್ರಮುಖ ಉತ್ತೇಜನವಾಗಿದೆ.

ಇಟಿಎಫ್‌ಗಳಲ್ಲಿ ಹೂಡಿಕೆ: ಷೇರು ಮತ್ತು ಬಾಂಡ್ ಮಾರುಕಟ್ಟೆಗಳು ಏರಿಳಿತಗೊಳ್ಳುವುದರಿಂದ ಹೂಡಿಕೆದಾರರು ಚಿನ್ನ-ಬೆಂಬಲಿತ ಇಟಿಎಫ್‌ಗಳಲ್ಲಿ ಸುರಕ್ಷತೆಯನ್ನು ಹುಡುಕುತ್ತಿದ್ದಾರೆ. ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತೀಯ ಚಿನ್ನದ ಇಟಿಎಫ್‌ಗಳಿಗೆ ಭಾರಿ ಒಳಹರಿವು ಕಂಡುಬಂದಿದೆ.

ಭಾರತದಲ್ಲಿ ಹೆಚ್ಚು ಬೇಡಿಕೆ

ಭಾರತದಲ್ಲಿ ಈಗ ಮದುವೆ, ಶುಭ ಕಾರ್ಯಗಳ ಸೀಸನ್​ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ದುರ್ಬಲ ರೂಪಾಯಿ ಮೌಲ್ಯ ಮತ್ತು ಹೆಚ್ಚಿನ ಆಮದು ಸುಂಕಗಳು ಭಾರತದಲ್ಲಿ ಚಿನ್ನದ ಬೆಲೆಯನ್ನು ಗಗನಕ್ಕೇರಿಸುತ್ತಿದೆ. ಬಡ್ಡಿದರಗಳ ಇಳಿಕೆ ಮತ್ತು ಮುಂದಿನ ದಿನಗಳಲ್ಲಿ ನಿರಂತರ ಹಣದುಬ್ಬರವು 2026ರಲ್ಲಿ ಚಿನ್ನದ ಬೆಲೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಕೇಂದ್ರ ಬ್ಯಾಂಕ್ ನೀತಿಗಳು, ಭೌಗೋಳಿಕ ರಾಜಕೀಯ ಬದಲಾವಣೆಗಳು ಮತ್ತು ಕರೆನ್ಸಿ ಚಲನೆಗಳು ಚಿನ್ನದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net