

Bihar: ಇದೇ ನವೆಂಬರ್ 06ಕ್ಕೆ ಎರಡು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಇಂದಿನಿಂದಲೇ ದಿನಗಣನೆ ಆರಂಭಗೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದಲೇ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ ಬಿಹಾರ, ಇದೀಗ 2025ರ ಎಲೆಕ್ಷನ್ ಹೊಸ್ತಿಲಲ್ಲಿದೆ.
ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಕಾರ್ಯತಂತ್ರಗಳಲ್ಲಿ ನಿರತವಾಗಿವೆ. ಇಂದು ಬಿಜೆಪಿ ತನ್ನ ಪಕ್ಷದಿಂದ ಸ್ಪರ್ಧಿಸಲಿರುವ 71 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆಡಳಿತ ಮತ್ತು ವಿರೋಧ ಪಕ್ಷದ ಮೈತ್ರಿಕೂಟಗಳಲ್ಲಿ ಸ್ಥಾನ ಎಣಿಕೆ ಮತ್ತು ಪ್ರಚಾರದ ಕುರಿತು ಸದ್ಯ ಚರ್ಚೆಗಳು ಜೋರಾಗಿವೆ.
ಈ ಸಂದರ್ಭದಲ್ಲಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಸ್ತುತ ಶಾಸಕರ ಕುರಿತು ಸಮಗ್ರ ವರದಿಯನ್ನು ಪ್ರಕಟಿಸಿದ್ದು, 2020 ರ ಚುನಾವಣೆಗಳು ಮತ್ತು ನಂತರದ ಉಪಚುನಾವಣೆಗಳಲ್ಲಿ ಶಾಸಕ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸುವ ಮೂಲಕ ಈ ವರದಿಯನ್ನು ಸಿದ್ಧಪಡಿಸಿದೆ. ಬಿಹಾರದ 241 ಹಾಲಿ ಶಾಸಕರಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇದೀಗ ಅನಾವರಣಗೊಳಿಸಲಾಗಿದೆ.
ಎಡಿಆರ್ ವರದಿ ಪ್ರಕಾರ, ಪ್ರಸ್ತುತ ಶಾಸಕರಲ್ಲಿ 194 ಅಥವಾ ಶೇ.80ರಷ್ಟು ಜನರು ಕೋಟ್ಯಾಧಿಪತಿಗಳೇ. 241 ಶಾಸಕರ ಒಟ್ಟು ಆಸ್ತಿ ಸುಮಾರು 1,121.6 ಕೋಟಿ ರೂ. ಮೌಲ್ಯದ್ದಾಗಿದೆ. ಬಿಜೆಪಿ 72 (ಶೇ. 87) ಶ್ರೀಮಂತ ಶಾಸಕರನ್ನು ಹೊಂದಿದೆ. ಕಮಲಂ ಪಕ್ಷವು ಒಟ್ಟು 83 ಶಾಸಕರನ್ನು ಹೊಂದಿದೆ. ಆರ್‌ಜೆಡಿ 72 ಶಾಸಕರು, ಅವರಲ್ಲಿ 63 (ಶೇ. 88) ಮಂದಿ ಸಿರಿವಂತರೇ. ಜೆಡಿಯು ಪಕ್ಷದ 47 ಶಾಸಕರಲ್ಲಿ 39 (ಶೇ. 83) ಶಾಸಕರು ಕೋಟ್ಯಾಧಿಪತಿಗಳು.
ಕಾಂಗ್ರೆಸ್ ಪಕ್ಷದ 17 ಶಾಸಕರಲ್ಲಿ 13 (ಶೇ.76) ಜನರು, ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಾತ್ಯತೀತ) ಪಕ್ಷದ ನಾಲ್ವರು ಶಾಸಕರಲ್ಲಿ ಇಬ್ಬರು (ಶೇ.50) ಜನರು ಶ್ರೀಮಂತರು. ಸಿಪಿಎಂ, ಸಿಪಿಐ ಮತ್ತು ಸಿಪಿಐನಿಂದ (ಎಂಎಲ್) ತಲಾ ಒಬ್ಬರು ಕೋಟ್ಯಾಧಿಪತಿಗಳಿದ್ದಾರೆ. ಬಿಹಾರ ವಿಧಾನಸಭೆಯಲ್ಲಿರುವ ಇಬ್ಬರು ಸ್ವತಂತ್ರ ಶಾಸಕರು ಕೋಟ್ಯಾಧಿಪತಿಗಳಲ್ಲ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ. ಮಾಜಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 4.7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಬಿಹಾರದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ, ನೀಲಂ ದೇವಿ 2022ರ ಉಪಚುನಾವಣೆಯಲ್ಲಿ ಮೊಕಾಮಾ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಅವರ ಚುನಾವಣಾ ಅಫಿಡವಿಟ್ ಪ್ರಕಾರ, ದೇವಿ ಒಟ್ಟು 80 ಕೋಟಿ ರೂ.ಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ಇದರಲ್ಲಿ 29.8 ಕೋಟಿ ರೂ. ಚರಾಸ್ತಿ ಮತ್ತು 50.6 ಕೋಟಿ ಸ್ಥಿರಾಸ್ತಿ ಎಂದು ಅಫಿಡವಿಟ್ ಉಲ್ಲೇಖಿಸಿದೆ. ತಮ್ಮ ಸಹ ಶಾಸಕರಿಗಿಂತ ಸಂಪತ್ತಿನ ವಿಷಯದಲ್ಲಿ ನೀಲಂ ಮುಂಚೂಣಿಯಲ್ಲಿದ್ದಾರೆ. ಗಯಾ ಜಿಲ್ಲೆಯ ಬೆಳಗಂಜ್‌ನ ಮತ್ತೊಬ್ಬ ಜೆಡಿಯು ಮಹಿಳಾ ಶಾಸಕಿ ಮನೋರಮಾ ದೇವಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 72.8 ಕೋಟಿ ರೂ. ಇನ್ನು ಭಾಗಲ್ಪುರ ಕಾಂಗ್ರೆಸ್ ಶಾಸಕ ಅಜಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ 43.2 ಕೋಟಿ ರೂ. ಎಂದು ಹೇಳಲಾಗಿದೆ,(ಏಜೆನ್ಸೀಸ್).