

ಕೇರಳ: ತಿರುವೋಣಂ ಬಂಪರ್ ಲಾಟರಿಯ ಅದೃಷ್ಟಶಾಲಿ ವಿಜೇತರಾಗಿ ತುರಾವೂರಿನ ಮೂಲದ ಶರತ್ ಎಸ್. ನಾಯರ್ (Prize Money), ತಾವು ಖರೀದಿ ಮಾಡಿದ TH 577825 ನಂಬರಿನ ಲಾಟರಿ ಟಿಕೆಟ್ನಿಂದಾಗಿ ಬರೋಬ್ಬರಿ 25 ಕೋಟಿ ರೂ.ಗಳನ್ನು ಬಹುಮಾನ ಹಣವಾಗಿ ಪಡೆದಿದ್ದಾರೆ. ಈ ಸುದ್ದಿ ವೈರಲ್ ಆಗಿದ್ದೇ ತಡ ಇದೀಗ ಅವರಿಗೊಂದು ಸಮಸ್ಯೆ ಎದುರಾಗಿದೆ! ಈ ಕುರಿತು ಸ್ವತಃ ಶರತ್ ಅವರೇ ಮಾತನಾಡಿದ್ದಾರೆ.
ಕೇರಳದ ಅಲಪ್ಪುಳ ಮೂಲದ ಶರತ್, ಈ ಬಾರಿಯ ಓಣಂ ಬಂಪರ್ನ ಬಹುಮಾನ ಹಣವನ್ನು ಗೆದ್ದರು. ಆದರೆ, ಅಂದಿನಿಂದ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಸಲಿಗೆ ಇಲ್ಲೇ ಆಗಿರುವುದು ಸಮಸ್ಯೆ. ಯಾವಾಗ ಶರತ್ 25 ಕೋಟಿ ರೂ. ಹಣ ಗೆದ್ದಿದ್ದಾರೆ ಎಂಬ ಸುದ್ದಿ ಹರಿದಾಡಿತೋ, ಅಂದಿನಿಂದ ಕೆಲವರು ಶರತ್ ಅವರ ಮನೆಗೆ ಭೇಟಿ ಕೊಡುತ್ತಿದ್ದಾರಂತೆ. ಕಾರಣ, ಕೌಟುಂಬಿಕ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಿಮ್ಮ ಹಣವು ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತದೆ ಎಂದು ಕೇಳಿಕೊಂಡಿದ್ದಾಗಿ ಶರತ್ ಒಂದು ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶರತ್, "ಮೊದಲಿಗೆ ಮೂವರು ನನ್ನ ಮನೆಯ ಬಾಗಿಲಿಗೆ ಬಂದು ಹಣ ಸಹಾಯ ಕೋರಿದರು. ಅಷ್ಟಕ್ಕೂ ಅವರ ಪರಿಚಯ ನನ್ನಗಿಲ್ಲವೇ ಇಲ್ಲ. ಈ ವೇಳೆ, ಬಂಪರ್ನಲ್ಲಿ ಬಂದ ಹಣ ಇನ್ನೂ ನನ್ನ ಕೈತಲುಪಿಲ್ಲ ಎಂದು ಅವರಿಗೆಲ್ಲ ಮನವರಿಕೆ ಮಾಡಿಸಿದೆ. ಹಲವರು ಹಣಕಾಸು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ವಿಷಯ ನನಗೂ ಗೊತ್ತಿದೆ" ಎಂದು ಹೇಳಿದ್ದಾರೆ.
"ನನಗೆ ಮೊದಲಿಗೆ ಸಮಾಧಾನ ಆಗಲೇ ಇಲ್ಲ. ಹೀಗಾಗಿ ನಾನು ನನ್ನ ಹೆಂಡತಿಗೆ ಕರೆ ಮಾಡಿ, ಟಿಕೆಟ್ ಪರಿಶೀಲಿಸುವಂತೆ ಹೇಳಿದೆ. ಅದಾದ ನಂತರ ಏನೋ ಕೆಲಸ ಇದೆ ಎಂಬ ಕಾರಣಕ್ಕೆ ಸುಮ್ಮನಾದೆ. ಬಳಿಕ ಮನೆಗೆ ಹಿಂತಿರುಗಿ ಮತ್ತೊಮ್ಮೆ ಪರಿಶೀಲಿಸಿದೆ. ಈ ವೇಳೆ ನನ್ನ ತಂದೆ, ತಾಯಿ, ಸಹೋದರ, ಹೆಂಡತಿ ಮತ್ತು ಮಗು ಮನೆಯಲ್ಲೇ ಇದ್ದರು. ನಾನು ಲಾಟರಿ ಗೆದ್ದಿದ್ದೇನೆ ಎಂದು ತಿಳಿದಾಗ ಆ ಸಂತೋಷನ್ನು ಹೇಗೆ ವ್ಯಕ್ತಪಡಿಸಬೇಕೆಂಬುದೇ ನನಗೆ ಗೊತ್ತಾಗಲಿಲ್ಲ" ಎಂದು ಶರತ್ ಹೇಳಿಕೊಂಡಿದ್ದರು,(ಏಜೆನ್ಸೀಸ್).