

ಕೇರಳ: ಡ್ರಗ್ಸ್ ಮಾರಾಟ ದಂಧೆಯಲ್ಲಿ ಮುಳುಗಿದ್ದ ಕೇರಳದ ವಕೀಲೆ (Lawyer) ಮತ್ತು ಆಕೆಯ ಪುತ್ರನನ್ನು ಕಡೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರಿಬ್ಬರು ದುಪ್ಪಟ್ಟು ಹಣಕ್ಕೆ ಮಾರುತ್ತಿದ್ದ ಮಾದಕವಸ್ತುಗಳನ್ನು ಇದೀಗ ಖಾಕಿ ವಶಪಡಿಸಿಕೊಂಡಿದೆ.
'ಎನ್ಡಿಟಿವಿ' ವರದಿ ಪ್ರಕಾರ, 'ಆಪರೇಷನ್ ಡಿ-ಹಂಟ್' ಹೆಸರಿನಲ್ಲಿ ತಾಯಿ ಮತ್ತು ಮಗನನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ಮೂರು ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಕಾರಿನಲ್ಲಿ ಕುಳಿತು ಈ ವ್ಯವಹಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ವಕೀಲೆ ಸತ್ಯಮೋಲ್ (46) ಮತ್ತು ಆಕೆಯ ಮಗ ಸೌರವ್ ಜಿತ್ (18) ಎಂದು ಗುರುತಿಸಲಾಗಿದೆ. ಇಬ್ಬರೂ ಅಂಬಲಪ್ಪುಳದ ನಿವಾಸಿಗಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾ ಮಾದಕ ದ್ರವ್ಯ ವಿರೋಧಿ ದಳ ಮತ್ತು ಪುನ್ನಪ್ರಾ ಪೊಲೀಸರು 'ಆಪರೇಷನ್ ಡಿ-ಹಂಟ್' ಭಾಗವಾಗಿ ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲಂನ ಹೋಟೆಲ್ ಮುಂದೆ ಡ್ರಗ್ಸ್ ಮಾರಾಟ ಮಾಡಲು ಕಾರಿನಲ್ಲಿ ಕುಳಿತಿದ್ದ ಅಮ್ಮ-ಮಗನ ಜೋಡಿಯನ್ನು ಅರೆಸ್ಟ್ ಮಾಡಿದ್ದಾರೆ. ಖಾಕಿ ಪ್ರಕಾರ, ಇಬ್ಬರೂ ಆಗಾಗ್ಗೆ ಕೇರಳದ ಎರ್ನಾಕುಲಂನಿಂದ ಮಾದಕ ದ್ರವ್ಯಗಳನ್ನು ಖರೀದಿಸುತ್ತಿದ್ದರು. ಅಲ್ಲಿಂದ ಆಲಪ್ಪುಳ ಜಿಲ್ಲೆಯಲ್ಲಿ ಖರೀದಿ ದರಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಹಲವು ದಿನಗಳಿಂದ ಅವರ ಮನೆಯ ಮೇಲೆ ಹದ್ದಿನ ಕಣ್ಣಿಟ್ಟು, ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಯಿತು ಎಂದು ಹೇಳಲಾಗಿದೆ.
ಕರುಣಗಪ್ಪಲ್ಲಿ ಫ್ಯಾಮಿಲಿ ಕೋರ್ಟ್ನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಮಹಿಳೆ ಸತ್ಯಮೋಲ್, ಪೊಲೀಸರ ತಪಾಸಣೆಗಳನ್ನು ತಪ್ಪಿಸಲು ಲಾಯರ್ ಎಂಬ ಲಾಂಛನವನ್ನು ತನ್ನ ಕಾರಿನ ಮುಂಭಾಗದಲ್ಲಿ ಅಳವಡಿಸಿಕೊಂಡು, ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ಇಬ್ಬರನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಬೆನ್ನಲ್ಲೇ ಅವರ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, 2.5 ಗ್ರಾಂ ಎಂಡಿಎಂಎ, 40 ಗ್ರಾಂ ಗಾಂಜಾ, ಎರಡು ಗ್ರಾಂ ಹೈಬ್ರಿಡ್ ಗಾಂಜಾ, ರೋಲಿಂಗ್ ಪೇಪರ್ ಮತ್ತು ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).