

Pradeep Ranganathan: ಈ ವರ್ಷದ ಫೆಬ್ರವರಿಯಲ್ಲಿ ತೆರೆಕಂಡು ಸೂಪರ್ಹಿಟ್ ಆದ ತಮಿಳು ಚಿತ್ರ ‘ಡ್ರ್ಯಾಗನ್’, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಸಿನಿಮಾ ಮೂಲಕ ಸಿನಿಪ್ರಿಯರ ಮನ ಗೆದ್ದ ನಟ ಪ್ರದೀಪ್ ರಂಗನಾಥನ್ ಇದೀಗ ತಮ್ಮ ಮುಂಬರುವ 'ಡ್ಯೂಡ್' ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿದ್ದಾರೆ. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಆಡಿದ ಮಾತಿಗೆ ನಟನ ಅಭಿಮಾನಿಗಳು ಮತ್ತು ಚಿತ್ರತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾಲಿವುಡ್ಗಿಂತಲೂ ಟಾಲಿವುಡ್‌ನಲ್ಲಿ ಪ್ರದೀಪ್ ರಂಗನಾಥನ್ ಅವರ ಹೆಸರು ಭಾರೀ ವೈರಲ್ ಆಗುತ್ತಿದೆ. ಒಂದು ಅವರ ಸಿನಿಮಾ ವಿಚಾರವಾಗಿದ್ದರೆ, ಮತ್ತೊಂದು ಪತ್ರಕರ್ತರೊಬ್ಬರು ಅವರ ಬಗ್ಗೆ ಆಡಿದ ಮಾತುಗಳಿಗೆ. ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, 'ನೀವು ಹೀರೋ ಮೆಟೀರಿಯಲ್ ಅಲ್ಲ. ಆದರೆ, ಕೇವಲ ಎರಡು ಚಿತ್ರಗಳಿಗೆ ಇಷ್ಟೊಂದು ಅಭಿಮಾನಿಗಳು ಇರುವುದು ಬಹಳ ಅಪರೂಪ' ಎಂದು ವ್ಯಂಗ್ಯವಾಡಿದರು. ಈ ವಿಷಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಮತ್ತು ನಟನ ಅಭಿಮಾನಿಗಳು ಅವರ ಬೆನ್ನಿಗೆ ನಿಂತರು. ಪತ್ರಕರ್ತರ ಪ್ರಶ್ನೆಗೆ ಪ್ರದೀಪ್ ಉತ್ತರಿಸುವ ಮುನ್ನವೇ ಮಾತಿಗಿಳಿದ ಹಿರಿಯ ನಟ ಶರತ್ ಕುಮಾರ್, ತಮ್ಮ ಶೈಲಿಯಲ್ಲೇ ಉತ್ತರಿಸಿದರು.
"A ಟು Z ವರೆಗೆ ಯಾರು ಹೀರೋ ಮೆಟೀರಿಯಲ್ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿರುವ ಎಲ್ಲರೂ ಹೀರೋ ಮೆಟೀರಿಯಲ್. ನಿಮಗೆ ನಾಯಕನ ಬಗ್ಗೆ ಯಾವುದೇ ನಿರ್ದಿಷ್ಟತೆಯಿಲ್ಲ. ಸಮಾಜಕ್ಕೆ ಪ್ರಯೋಜನಕಾರಿಯಾದ ಯಾವುದೇ ಕಾರ್ಯವನ್ನು ಮಾಡುವ ವ್ಯಕ್ತಿ ಮಾತ್ರ ಹೀರೋ " ಎಂದರು. ಶರತ್ ಮಾತಿನ ಬಳಿಕ ಬಹಳ ನಮ್ರತೆಯಿಂದ ಮಾತನಾಡಿದ ಪ್ರದೀಪ್, "ಕಠಿಣ ಪರಿಶ್ರಮವಿದೆ. ಕಳೆದ ಕೆಲವು ತಿಂಗಳುಗಳಿಂದ ನನಗೆ ಸಿಗುತ್ತಿರುವ ಪ್ರೀತಿಯ ಬಗ್ಗೆ ನಾನೇ ಯೋಚಿಸುತ್ತಿದ್ದೇನೆ. ನನ್ನಂತಹ ಅನೇಕ ಪ್ರತಿಭಾನ್ವಿತ ಕಲಾವಿದರಿದ್ದಾರೆ. ಜನರು ನನ್ನಲ್ಲಿ ತಮ್ಮನ್ನು ತಾವು ನೋಡಿರಬಹುದು ಎಂದು ನಾನು ಭಾವಿಸುತ್ತೇನೆ" ಎಂದರು.
"ಬೆಳ್ಳಿಪರದೆಯಲ್ಲಿ ನನ್ನನ್ನು ನೋಡಿದಾಗ, ಕೆಲವರು ತಾವೇ ನಾಯಕ ಎಂದು ಭಾವಿಸಬಹುದು. ಅವರು ಚಿತ್ರದ ಒಂದು ಭಾಗವಾಗಿದ್ದರೆ, ನನ್ನೊಂದಿಗೆ ಅವರು ನಟಿಸುತ್ತಿದ್ದರೆ, ಫೈಟ್ ಮಾಡುತ್ತಿದ್ದರೆ, ನನ್ನ ಪಾತ್ರದ ಮೂಲಕ ಅವರೆಲ್ಲರೂ ತಮ್ಮನ್ನು ತಾವು ನೋಡಿಕೊಳ್ಳುತ್ತಿದ್ದಾರೆ ಎಂದರೆ, ನಾನು ಹೀರೋ ಆಗಿದ್ದೀನಿ ಎಂದೇ ಅರ್ಥ" ಎಂದು ಖಡಕ್ ಉತ್ತರ ನೀಡಿದ್ದಾರೆ.
ಇದೇ ಅ.17ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಎದುರುನೋಡುತ್ತಿರುವ 'ಡ್ಯೂಡ್' ಚಿತ್ರದಲ್ಲಿ ನಟ ಪ್ರದೀಪ್ ರಂಗನಾಥನ್ ಮತ್ತು ನಟಿ ಮಮಿತಾ ಬೈಜು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿಶ್ವರನ್ ಅವರ ಚೊಚ್ಚಲ ನಿರ್ದೇಶನ ಇದಾಗಿದ್ದು, ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ,(ಏಜೆನ್ಸೀಸ್).