

ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ನಟಿ ಪಾಯಲ್ ಘೋಶ್ ಮೀಟೂ ಆರೋಪ ಹೊರಿಸಿರುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದಿರುವ ಪಾಯಲ್ ಮೇಲೆ ರಿಚಾ ಚಡ್ಢಾ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವ ವಿಷಯ ಗೊತ್ತೇ ಇದೆ.
ಈ ನಿಟ್ಟಿನಲ್ಲಿ ರಿಚಾ ಹೆಜ್ಜೆ ಇಟ್ಟಿದ್ದರೂ ಪಾಯಲ್ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಅನುರಾಗ್ ತನ್ನ ಬಳಿ ಏನು ಹೇಳಿದರೋ ಅದನ್ನೂ ಹೇಳಿದೆನೋ ಹೊರತು, ಇಲ್ಲಿ ಯಾರನ್ನೂ ಅನಾವಶ್ಯಕವಾಗಿ ಎಳೆದು ತರುವ ಉದ್ದೇಶ ತಮಗಿಲ್ಲ ಎಂದು ಪಾಯಲ್ ಹೇಳಿಕೊಂಡಿದ್ದಾರೆ.
'ನನಗೆ ಅವರ್ಯಾರೂ ವೈಯಕ್ತಿಕವಾಗಿ ಗೊತ್ತಿಲ್ಲ. ಹೀಗಿರುವಾಗ ಅವರ ಹೆಸರನ್ನು ಸುಮ್ಮನೆ ಯಾಕೆ ಎಳೆದು ತರಲಿ. ನಾನು ಎರಡು ದಿನಗಳ ಕಾಲ ಅನುರಾಗ್ ಕಶ್ಯಪ್ ಅವರ ಮನೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಅವರು ನನಗೆ ಏನೆಲ್ಲಾ ಹೇಳಿದ್ದರೋ ಅದನ್ನೇ ಹೇಳಿದೆ' ಎನ್ನುತ್ತಾರೆ ಪಾಯಲ್.
ಈ ಬಗ್ಗೆ ರಿಚಾಗೆ ಸಮಸ್ಯೆ ಇದ್ದರೆ ಅನುರಾಗ್ ಅವರನ್ನೇ ಕೇಳಬೇಕು ಎಂದಿರುವ ಪಾಯಲ್, 'ನನಗೆ ರಿಚಾ ವೈಯಕ್ತಿಕವಾಗಿ ಗೊತ್ತಿಲ್ಲ. ಹಾಗಿರುವಾಗ ಸುಮ್ಮನೆ ಅವರಿಗೆ ಮಸಿ ಬಳಿಯುವುದಕ್ಕೆ ಯಾಕೆ ಪ್ರಯತ್ನ ಮಾಡಲಿ? ಅನುರಾಗ್ ಏನು ಹೇಳಿದರೋ ಅದನ್ನು ನಾನು ಹೇಳಿದ್ದೆ ಅಷ್ಟೇ. ಅನುರಾಗ್ ಯಾಕೆ ರಿಚಾ ಹೆಸರನ್ನು ಹೇಳಿದರು ಎಂಬುದನ್ನು, ಅವರ ಹತ್ತಿರವೇ ಹೋಗಿ ಕೇಳಲಿ' ಎಂದು ಪಾಯಲ್ ಹೇಳಿದ್ದಾರೆ.
ಇನ್ನು ಅನುರಾಗ್ ಅಂತ ಮನುಷ್ಯನಲ್ಲ, ಹಾಗೆ ನಡೆದುಕೊಂಡಿರುವುದಕ್ಕೆ ಸಾಧ್ಯವಿಲ್ಲ ಎಂದು ಅವರ ಮಾಜಿ ಪತ್ನಿಯರಾದ ಆರತಿ ಬಜಾಜ್ ಮತ್ತು ಕಲ್ಕಿ ಕೊಚ್ಚಿನ್ ಹೇಳಿರುವುದಷ್ಟೇ ಅಲ್ಲ, ಅನುರಾಗ್ ಬೆನ್ನಿಗೆ ನಿಂತಿದ್ದಾರೆ. ಆದರೆ, ಇದನ್ನು ಚೀಪ್ ಸ್ಟಂಟ್ ಎಂದು ಬಣ್ಣಿಸಿದ್ದಾರೆ ಪಾಯಲ್.
'ಅನುರಾಗ್ ಅಷ್ಟೊಳ್ಳೆಯ ಮನುಷ್ಯನಾಗಿದ್ದರೆಲ, ಇಷ್ಟಕ್ಕೂ ಅವರ ಪತ್ನಿಯರು ಯಾಕೆ ಬಿಟ್ಟು ಹೋಗಬೇಕಿತ್ತು. ಅನುರಾಗ್ ಜತೆಗೆ ಅವರಿಬ್ಬರೂ ಸಂತೋಷವಾಗಿದ್ದರೆ, ಅವರನ್ನು ಬಿಟ್ಟು ಹೋಗುತ್ತಲೇ ಇರಲಿಲ್ಲ. ಆಗ ಬಿಟ್ಟು ಹೋಗಿ, ಈಗ ಅವರ ಸಪೋರ್ಟ್ಗೆ ಬಂದಿದ್ದಾರೆ. ಬಹುಶಃ ಅವರೆಲ್ಲರ ಮಧ್ಯೆ ಹಣಕಾಸಿನ ವ್ಯವಹಾರವಿರಬಹುದು. ಹಾಗಾಗಿ ಈ ರೀತಿ ಬಂದು ಸ್ಟಂಟ್ ಮಾಡುತ್ತಿದ್ದಾರೆ' ಎಂದು ಪಾಯಲ್ ಹೇಳಿಕೊಂಡಿದ್ದಾರೆ.