

ಚೆನ್ನೈ: ಭಾನುವಾರ ಕಾಲಿವುಡ್ನ ಜನಪ್ರಿಯ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದರು. ಮಣಿರತ್ನಂ, ಶಂಕರ್, ವೆಟ್ರಿಮಾರನ್, ಗೌತಮ್ ಮೆನನ್, ಲಿಂಗುಸ್ವಾಮಿ ... ಹೀಗೆ ತಮಿಳಿನ ದೊಡ್ಡ ಹೆಸರುಗಳೆಲ್ಲಾ ಒಂದು ಕಡೆ ಜಮಾಯಿಸಿದ್ದರು. ಅವರೆಲ್ಲರೂ ಏನಾದರೂ ಹೊಸ ಸಂಘ ಕಟ್ಟುತ್ತಿದ್ದಾರಾ ಅಥವಾ ಎಲ್ಲಾ ಸೇರಿಕೊಂಡು ಹೊಸದೇನನ್ನೋ ಮಾಡುವುದಕ್ಕೆ ಹೊರಟಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.
ಹಾಗೇನಿಲ್ಲ. ತಮಿಳಿನ ಸ್ಟಾರ್ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದೇನೋ ಹೌದು. ಆದರೆ, ಸಂಘ ಕಟ್ಟುವುದಕ್ಕೋ ಅಥವಾ ಬೇರೆ ಯಾವುದೋ ಕಾರ್ಯಕ್ರಮಕ್ಕೋ ಅಲ್ಲ. ಅವರೆಲ್ಲಾ ಸೇರಿದ್ದು, ತಮಿಳಿನ ಜನಪ್ರಿಯ ನಿರ್ದೇಶಕ ಮಿಸ್ಕಿನ್ ಅವರ ಹುಟ್ಟುಹಬ್ಬದ ಸಲುವಾಗಿ.
'ಚಿತ್ತಿರಂ ಪೇಸುದಡಿ' ಚಿತ್ರದ ಮೂಲಕ ನಿರ್ದೇಶಕರಾದ ಷಣ್ಮುಖು ರಾಜ ಅಲಿಯಾಸ್ ಮಿಸ್ಕಿನ್, ನಂತರದ ವರ್ಷಗಳಲ್ಲಿ 'ಅಂಜಾತೆ', 'ಯುದ್ಧಂ ಸೈ', 'ಮುಗಮೂಡಿ', 'ಪಿಸಾಸು', 'ತುಪ್ಪರಿವಾಳನ್', 'ಸೈಕೋ' ಮುಂತಾದ ಹಲವು ವಿಭಿನ್ನ ಚಿತ್ರಗಳನ್ನು ನೀಡಿದವರು ಅವರು. ಹೀಗೆ ವಿಭಿನ್ನ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಮಿಸ್ಕಿನ್ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದಕ್ಕೆ ತಮಿಳಿನ ಸ್ಟಾರ್ ನಿರ್ದೇಶಕರೆಲ್ಲಾ ಒಂದೇ ಕಡೆ ಸೇರಿದ್ದು ವಿಶೇಷವಾಗಿತ್ತು.
ಇನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ಮಿಸ್ಕಿನ್ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ತಮ್ಮ ಜನಪ್ರಿಯ ಚಿತ್ರವಾದ 'ಪಿಸಾಸು'ಮ ಮುಂದುವರೆದ ಭಾಗವನ್ನು ಅವರು ಘೋಷಿಸಿದ್ದು, ಚಿತ್ರಕ್ಕೆ 'ಪಿಸಾಸು 2' ಎಂಬ ಹೆಸರನ್ನು ಇಟ್ಟಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆಂಡ್ರಿಯಾ ಜೆರಿಮಿಯಾ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.