ಕುತೂಹಲಭರಿತವಾಗಿದೆ ಅಟ್ಲಿ ಸಿನಿಮಾದಲ್ಲಿ ಶಾರುಖ್​ ನಿಭಾಯಿಸಲಿರುವ ಪಾತ್ರ!

collage (11)
Published on

ಮುಂಬೈ: ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಕಾಂಬಿನೇಷನ್​ನಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹರಿದಾಡಿದ್ದಾಗ ಅಭಿಮಾನಿ ವಲಯದಲ್ಲಿ ಮನೆ ಮಾಡಿದ್ದ ಸಂಭ್ರಮ ಅಷ್ಟಿಷ್ಟಲ್ಲ. ಕಳೆದ ವರ್ಷವೇ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಇದೂವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಜತೆಗೆ ಶಾರುಖ್​ ನಿಭಾಯಿಸಲಿರುವ ಪಾತ್ರದ ಬಗ್ಗೆಯೂ!

ಹೌದು, ಅಟ್ಲಿ ಮತ್ತು ಶಾರುಖ್​ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆಯಂತೆ. ಈ ಸಿನಿಮಾದಲ್ಲಿ ಶಾರುಖ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೀಗ ಅಭಿಮಾನಿ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಟ್ಲಿ ನಿರ್ದೇಶನದ ಸಿನಿಮಾಗಳಲ್ಲಿ ದ್ವಿಪಾತ್ರ ಮತ್ತು ತ್ರಿಪಾತ್ರಗಳೇ ಹೈಲೈಟ್​. ಇದೀಗ ಆ ಪ್ರಯೋಗ ಶಾರುಖ್​ ಸಿನಿಮಾದಲ್ಲಿಯೂ ಆಗಲಿದೆ ಎಂದೇ ಹೇಳಲಾಗುತ್ತಿದೆ.

ಸದ್ಯಕ್ಕೆ ವಾರ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಶಾರುಖ್ ಬಿಜಿಯಾಗಿದ್ದಾರೆ. ಇತ್ತ ರಾಜ್​ಕುಮಾರ್ ಹಿರಾನಿ ಸಿನಿಮಾದಲ್ಲೂ ಶಾರುಖ್​ ನಟಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ, ಕಥೆ ವಿಚಾರವಾಗಿ ರಾಜ್​ಕುಮಾರ್ ಕೆಲಸ ಮುಂದುವರಿಸಿದ್ದಾರೆ. ಹಾಗಾಗಿ 2021ಕ್ಕೆ ಅಟ್ಲಿ ನಿರ್ದೇಶನದ ಸಿನಿಮಾ ಸೆಟ್ಟೇರುವುದು ಖಚಿತ ಎನ್ನಲಾಗುತ್ತಿದೆ.

ಅಟ್ಲಿ ಸಿನಿಮಾದಲ್ಲಿ ಶಾರುಖ್​ಗೆ ಜೋಡಿಯಾಗಿ ಮತ್ತೆ ದೀಪಿಕಾ ಪಡುಕೋಣೆ ನಟಿಸುವುದು ಅಧಿಕೃತ ಎಂಬ ಮಾತು ಬಿಟೌನ್​ ಅಂಗಳದಿಂದ ಕೇಳಿಬರುತ್ತಿದೆ. ದೀಪಿಕಾ ಅವರನ್ನು ಬಾಲಿವುಡ್​ಗೆ ಪರಿಚಯಿಸಿದ್ದೇ ಶಾರುಖ್​ ಖಾನ್​. ಓಂ ಶಾಂತಿ ಓಂ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ದೀಪಿಕಾ ಎಂಟ್ರಿ ಪಡೆದಿದ್ದರು. ಇದೀಗ ಮತ್ತೆ ಶಾರುಖ್​ ಜತೆ ನಟಿಸುವ ಸಾಧ್ಯತೆ ಇದ್ದು, ಹಿಂದಿ ಜತೆಗೆ ತಮಿಳಿಗೂ ಈ ಚಿತ್ರ ಡಬ್ ಆಗಲಿದೆ.

ಅಂದಹಾಗೆ, ಆ ಚಿತ್ರಕ್ಕೆ ಸ್ವತಃ ಶಾರುಖ್ ಬಂಡವಾಳ ಹೂಡಲಿದ್ದಾರೆ. ಹೋಮ್​ ಬ್ಯಾನರ್​ ರೆಡ್​ಚಿಲ್ಲೀಸ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ನಲ್ಲಿ ಸಿನಿಮಾ ತಯಾರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net