

Sandalwood: ನಾನು ನನಗೆ ತಿಳಿದ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ, ಹೋರಾಟ ಮಾಡಲಿ. ನೆಲ ಜಲಕ್ಕಾಗಿ ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಭೋತ್ಸವ ಸಮಾವೇಶದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಚಲನಚಿತ್ರದವರು ನಿಮ್ಮ ಮೇಲೆ ಬೇಸರವಾಗಿದ್ದಾರೆ ಎಂದಾಗ, "ಚಲನಚಿತ್ರದವರು, ಅಶೋಕ್ ಏನಾದರೂ ಮಾತನಾಡಿಕೊಳ್ಳಲಿ. ಮೇಕೆದಾಟು ಹೋರಾಟ ನಡೆಯುವಾಗ ಬರಲಿಲ್ಲ. ಇದೇ ನಟ ಪ್ರೇಮ್ ಹೋರಾಟಕ್ಕೆ ಬಂದು ಬಿಜೆಪಿಯವರಿಂದ ಕೇಸ್ ಹಾಕಿಸಿಕೊಂಡರು. ದುನಿಯಾ ವಿಜಯ್, ಸಾಧು ಕೋಕಿಲ ಅವರ ಮೇಲೂ ಕೇಸ್ ಹಾಕಲಾಯಿತು. ನಮ್ಮ ಮೇಲೆ ಹಾಕಲಿ ಅವರ ಮೇಲೆ ಏಕೆ? ಎಂದು ಗರಂ ಆದರು.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರ ಕಾರ್ಯಕ್ರಮ. ಸರ್ಕಾರದ್ದೇ? ಅದು ಚಲನಚಿತ್ರ ರಂಗದ ಕಾರ್ಯಕ್ರಮ. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕಲ್ಲವೇ? ಚಲನಚಿತ್ರ ರಂಗ ಸತ್ತು ಹೋಯಿತು. ಟಾಕೀಸ್ ಗಳು ಮುಚ್ಚಿ ಹೋದವು, ಊಟ ಇಲ್ಲ ಎಂದು ಮಾತನಾಡುತ್ತಾರೆ. ಯಾರಿಗಾಗಿ ಚಲನಚಿತ್ರ ಉತ್ಸವ ಮಾಡುತ್ತಿರುವುದು?" ಎಂದರು.
"ಚಿತ್ರರಂಗ ಎಂದರೆ ಕ್ಯಾಮೆರಾಮೆನ್, ಬರಹಗಾರ, ಲೈಟ್ ಬಾಯ್ , ನಿರ್ಮಾಪಕ, ನಿರ್ದೇಶಕ ಸೇರಿದಂತೆ ಎಲ್ಲರೂ ಸೇರಿದ್ದಾರೆ. ಅವರ ಹಬ್ಬವನ್ನು ಅವರೇ ಸಂಭ್ರಮಿಸಲಿಲ್ಲ ಎಂದರೆ?" ಎಂದರು.
ಚಲನಚಿತ್ರದವರು ಕಾಂಗ್ರೆಸ್ ಕಾರ್ಯಕರ್ತರೇ ಎನ್ನುವ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಕಾರ್ಯಕರ್ತರು ಎಂದಲ್ಲ. ಉತ್ಸವ ಚಿತ್ರರಂಗದವರ ಕಾರ್ಯಕ್ರಮ. ಇತ್ತೀಚಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ಅವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರೇ?, ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರಿಗೆ ನೀಡುತ್ತಾ ಇದ್ದೇವೆಯೇ? ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆಗಳನ್ನು ಪಡೆಯಬೇಡಿ ಎಂದು ಕರೆ ನೀಡಲಿ ಎಂದು ಕಿಡಿ ಕಾರಿದರು.
ಉಳುವವನೆ ಭೂಮಿಯ ಒಡೆಯ ಯೋಜನೆಯ ಲಾಭವನ್ನು ಎಲ್ಲರೂ ಪಡೆದಿದ್ದಾರೆ. ಬೇರೆ ಪಕ್ಷದವರೂ ಇದನ್ನು ಅನುಭವಿಸುತ್ತಿದ್ದಾರೆ. ಬಸ್ ಅಲ್ಲಿ ಬಿಜೆಪಿಯವರು ದುಡ್ಡು ಕೊಟ್ಟು ಓಡಾಡಲಿ. ಜನ ಸರಿ ಇದ್ದಾರೆ. ಆದರೆ ಈ ನಾಯಕರಿಗೆ ಅಸೂಯೆ. ನಮಗೆ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿಯಿಂದ ಸಾಯುತ್ತಿದ್ದಾರೆ ಎಂದರು.