

ನವದೆಹಲಿ: ಭಾನುವಾರ (ಸೆ.15) ಮುಂದಿನ 48 ಗಂಟೆಗಳೊಳಗೆ ತಮ್ಮ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಘೋಷಿಸುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದೇ ತಡ ಇದೀಗ ಮುಂದಿನ ದೆಹಲಿ ಸಿಎಂ ಯಾರು ಎಂಬ ಪ್ರಶ್ನೆ ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದು, ತಮ್ಮ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿದರೆ ಮುಂದೆ ಅವರ ಪಕ್ಷದಿಂದ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿದೆ. ಸದ್ಯ ಈ ಚರ್ಚೆಗಳ ಬೆನ್ನಲ್ಲೇ ಇದೀಗ ಮೂವರು ಹೆಸರಾಂತ ರಾಜಕಾರಣಿಗಳ ಹೆಸರು ಮುನ್ನೆಲೆಗೆ ಬಂದಿದ್ದು ,ಅನೇಕರ ಹುಬ್ಬೇರಿಸಿದೆ.
ನವದೆಹಲಿಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮಹಾರಾಷ್ಟ್ರ ಚುನಾವಣೆಯ ಜತೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಸಬೇಕೆಂದು ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. "ನಾನು ಜನರ ಬಳಿಗೆ ಹೋಗುತ್ತೇನೆ. ಮರುಚುನಾವಣೆ ನಂತರವೇ ಉನ್ನತ ಕಚೇರಿಗೆ ವಾಪಾಸ್ ಬರುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ" ಹೇಳಿದ್ದಾರೆ. ಒಟ್ಟಾರೆ ಸಿಎಂ ಹುದ್ದೆಯ ರೇಸ್ನಿಂದ ನಾವಿಬ್ಬರು ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿರುವ ಎಎಪಿಯ ಉನ್ನತ ನಾಯಕರು, ತಮ್ಮ ಪಕ್ಷದ ಇತರೆ ನಾಯಕರಿಗೆ ಸ್ಥಾನ ಬಿಟ್ಟುಕೊಟ್ಟಂತೆ ಕಂಡುಬಂದಿದೆ.
ಹೊಸ ಅಬಕಾರಿ ನೀತಿ ಕೇಸ್ನಲ್ಲಿ ಆರು ತಿಂಗಳ ಕಾಲ ಜೈಲುವಾಸ ಅನುಭವಿಸಿದ ಕೇಜ್ರಿವಾಲ್, ಇದೇ ಸೆ.13ರಂದು ನ್ಯಾಯಾಲಯ ನೀಡಿದ ಷರತ್ತುಬದ್ಧ ಜಾಮೀನಿನ ಆಧಾರದ ಮೇರೆಗೆ ಜೈಲಿನಿಂದ ಹೊರಬಂದರು. ರಿಲೀಸ್ ಆದ ತಕ್ಷಣವೇ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ನನ್ನ ಮೇಲೆ ಬಂದಿರುವ ಆರೋಪಗಳು ಸುಳ್ಳು. ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ಬೇಕಿದೆ" ಎಂಬುದನ್ನು ಒತ್ತಿ ಹೇಳಿದ್ದಾರೆ.
ಸದ್ಯ ಸಿಎಂ ರೇಸ್ನಿಂದ ಕೇಜ್ರಿವಾಲ್ ಹೊರಗುಳಿದ ಹಿನ್ನಲೆ ಇದೀಗ ಎಎಪಿ ಪಕ್ಷದ ಪ್ರಮುಖ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ರಾಘವ್ ಚಡ್ಡಾ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಮೂವರಲ್ಲಿ ಯಾರು ಮುಖ್ಯಮಂತ್ರಿಗಳ ಸ್ಥಾನ ಅಲಂಕರಿಸಬಹುದು ಎಂಬ ಲೆಕ್ಕಾಚಾರಗಳು ಸದ್ಯ ಬಲು ಜೋರಾಗಿವೆ,(ಏಜೆನ್ಸೀಸ್).