

ಕೊಚ್ಚಿ: ನಟಿ ಶಾಮ್ನಾ ಖಾಸಿಂ ಬೆದರಿಸಿ ಸುಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಗ್ಯಾಂಗ್ಗೂ ಕೇರಳದ ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ 30 ಕೆ.ಜಿ. ಚಿನ್ನದ ಕಳ್ಳಸಾಗಣೆಯಲ್ಲಿ ಸಿಲುಕಿಬಿದ್ದಿರುವ ಚಿನ್ನದ ರಾಣಿ ಸ್ವಪ್ನಾ ಸುರೇಶ್ಗೂ ನಂಟಿದೆ ಎಂಬುದು ತಿಳಿದುಬಂದಿದೆ.
ಶಾಮ್ನಾ ಖಾಸಿಂ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿಚಾರಣೆ ವೇಳೆ ಪ್ರಭಾವಿ ಮಹಿಳೆಯೊಬ್ಬರ ಬೆಂಬಲ ಇರುವುದಾಗಿ ಈ ಹಿಂದೆಯೇ ಒಪ್ಪಿಕೊಂಡಿದ್ದರು. ಅಲ್ಲದೆ, ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದಾಗಿಯೂ ಬಹಿರಂಗಪಡಿಸಿದ್ದರು. ಆದರೆ, ಈ ವಿಚಾರದಲ್ಲಿ ಆರೋಪಿಗಳು ಹೆಚ್ಚಿನ ಮಾಹಿತಿ ತಿಳಿಸಿರಲಿಲ್ಲ. ಇದೇ ಸುಳಿವಿನಿಂದಾಗಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕೇರಳದ ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್ ಬ್ಯಾಗೇಜ್’ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 13.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಾಮ್ನಾಗೆ ವಂಚಿಸಿದ್ದು ಹೇಗೆ?
ಇನ್ನು ಆರೋಪಿಗಳ ಗುಂಪಿನಲ್ಲಿ ಓರ್ವ ತಾನೂ ಚಿನ್ನದಂಗಡಿ ಮಾಲೀಕ ದುಬೈನಲ್ಲಿ ಸ್ವಂತ ಅಂಗಡಿ ಇದೆ ಎಂದು ಹೇಳಿ, ಶಾಮ್ನಾ ಪರಿಚಯ ಮಾಡಿಕೊಂಡು ಮದುವೆ ಪ್ರಸ್ತಾಪವನ್ನಿಟ್ಟು, ನಂತರದ ದಿನಗಳಲ್ಲಿ ಆಕೆಗೆ ಹಣದ ಬೆದರಿಕೆಯನ್ನೊಡ್ಡಿ ಬಂಧಿತರಾಗಿದ್ದರು. ಬಳಿಕ ವಿಚಾರಣೆ ವೇಳೆ ಆರೋಪಿಗಳು ತಮ್ಮ ಕಳ್ಳಸಾಗಾಣೆಗಾಗಿ ಮಾಡೆಲ್ ಹಾಗೂ ನಟಿಯರನ್ನು ಬೆದರಿಸಿ ಬಳಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿತ್ತು.
ಮಾಲಿವುಡ್ ನಂಟು?
ಇದೇ ವಿಚಾರ ಕಸ್ಟಮ್ಸ್ ಅಧಿಕಾರಿಗಳಿಗೆ ತಿಳಿದಾಗ ಪ್ರಕರಣದ ವಿವರವಾದ ತನಿಖೆ ನಡೆಸಿದ ಅಧಿಕಾರಿಗಳಿಗೆ ಮತ್ತೊಂದು ಅಚ್ಚರಿ ವಿಚಾರ ಬೆಳಕಿಗೆ ಬಂದಿತ್ತು. ಯುಎಇನಲ್ಲಿ ವೇದಿಕೆ ಕಾರ್ಯಕ್ರಮ ಹೆಸರಿನಲ್ಲಿ ಸಿನಿಮಾ ರಂಗದ ಕೆಲ ಮಂದಿ ಕಳ್ಳಸಾಗಾಣೆಯಲ್ಲಿ ತೊಡಗಿದ್ದಾರೆಂದು ತಿಳಿಯಿತು.
ಆ ಪ್ರಭಾವಿ ಮಹಿಳೆ ಸ್ವಪ್ನಾ ಸುರೇಶ್?
ಇನ್ನು ಕಳ್ಳಸಾಗಾಣೆ ಬಗ್ಗೆ ಗ್ಯಾಂಗ್ ಅನ್ನು ಪ್ರಶ್ನಿಸಿದಾಗ, ಓರ್ವ ಆರೋಪಿ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾನೆ. ಗಂಭೀರ ಪ್ರಕರಣಗಳಲ್ಲಿ ಪ್ರಭಾವಿ ಮಹಿಳೆಯೊಬ್ಬರು ನಮಗೆ ಸಹಾಯ ಮಾಡುತ್ತಿದ್ದರು ಎಂದು ತಿಳಿಸಿದ್ದಾನೆ. ಆ ಮಹಿಳೆ ಪ್ರಸ್ತುತ ಸರ್ಕಾರದೊಂದಿಗೆ ಹತ್ತಿರದ ನಂಟನ್ನು ಹೊಂದಿದ್ದಾರೆ ಎಂತಲೂ ತಿಳಿಸಿದ್ದಾನೆ.
ಪೊಲೀಸರು ಇದೇ ವಿಚಾರವನ್ನು ಕಸ್ಟಮ್ಸ್ ಗುಪ್ತಚರ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಇದೇ ಮಾಹಿತಿ ಆಧಾರದ ಮೇಲೆ ಪೊಲೀಸರು ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್ ಬ್ಯಾಗೇಜ್’ನಲ್ಲಿನ 30 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)