ವಿಶ್ವಕಪ್​ 2023: ಅತಿ ಹೆಚ್ಚು ಡಾಟ್​ ಬಾಲ್​ ಎಸೆದ ಬೌಲರ್​ಗಳು ಯಾರು? ಭಾರತವೇ ಮೇಲುಗೈ!

bowlers
Published on

ನವದೆಹಲಿ: ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ಎರಡರಲ್ಲೂ ಭಾರತದ ಪ್ರಾಬಲ್ಯ ಮುಂದುವರಿದಿದ್ದು, ವಿಶ್ವಕಪ್​​​​ ಗೆಲ್ಲುವ ಎಲ್ಲರ ನೆಚ್ಚಿನ ತಂಡವಾಗಿದೆ. ಟೀಮ್​ ಇಂಡಿಯಾ ಈ ಬಾರಿ ಬ್ಯಾಟಿಂಗ್​ಗಿಂತ ಬೌಲಿಂಗ್​​ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಬಲಿಷ್ಠ ತಂಡಗಳಾದ ದಕ್ಷಿಣ ಆಫ್ರಿಕಾವನ್ನು 83 ರನ್​ಗಳಿಗೆ ಮತ್ತು ಶ್ರೀಲಂಕಾ ತಂಡವನ್ನು ಕೇವಲ 55 ರನ್​ಗಳಿಗೆ ಆಲೌಟ್​ ಮಾಡಿ ಭಾರೀ ಅಂತರದಲ್ಲಿ ಗೆಲುವು ದಾಖಲಿಸಿದೆ.

ಜಸ್ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​ ಮತ್ತು ಮೊಹಮ್ಮದ್​ ಶಮಿ ಅವರಂತ ಶ್ರೇಷ್ಠ ಬೌಲರ್​ಗಳಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ಮತ್ತೊಂದು ವಿನೂತನ ದಾಖಲೆಯಲ್ಲೂ ಭಾರತದ ಬೌಲರ್​ಗಳೇ ಮುಂದಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಅತಿ ಹೆಚ್ಚು ಡಾಟ್​ ಬಾಲ್​ ಎಸೆದ ಬೌಲರ್​ಗಳ ಪೈಕಿ ಭಾರತದ ಬೌಲರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ನಾವೀಗ ನೋಡೋಣ.

ಎದುರಾಳಿ ತಂಡದ ಬ್ಯಾಟರ್​ಗಳಿಗೆ ತಮ್ಮ ಮೊನೆಚಾದ ಬೌಲಿಂಗ್​ ದಾಳಿಯಿಂದ ನಡುಕ ಹುಟ್ಟಿಸಿರುವ ಟೀಮ್​ ಇಂಡಿಯಾದ ಡೆತ್​ ಓವರ್ ಸ್ಪೆಷಲಿಸ್ಟ್ ಜಸ್ಪ್ರಿತ್​ ಬೂಮ್ರಾ, ಅತಿ ಹೆಚ್ಚು ಡಾಟ್​ ಬಾಲ್​ ಎಸೆದವರ ಪಟ್ಟಿಯಲ್ಲಿ 268 ಡಾಟ್​ ಬಾಲ್​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್​ ತಂಡದ ವೇಗಿ ಟ್ರೆಂಟ್​ ಬೌಲ್ಟ್​ ಇದ್ದು, 245 ಡಾಟ್​ ಬಾಲ್​ಗಳನ್ನು ಎಸೆದಿದ್ದಾರೆ.

ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ವೇಗಿ ಶಾಹೀನ್​ ಶಾ ಅಫ್ರಿದಿ (241) ಇದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ಮ್ಯಾಕ್ರೋ ಜಾನ್​ಸೆನ್ (241), ಭಾರತದ ರವೀಂದ್ರ ಜಡೇಜಾ (226), ನೆದರ್ಲೆಂಡ್​ನ ಆರ್ಯನ್​ ದತ್​ (217), ಭಾರತದ ಕುಲದೀಪ್​ ಯಾದವ್​ (215), ಆಸ್ಟ್ರೇಲಿಯಾದ ಜೋಶ್​ ಹಜಾಲ್​ವುಡ್​ (214), ಭಾರತದ ಮೊಹಮ್ಮದ್​ ಸಿರಾಜ್​ (214) ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ನಾಲ್ವರು ಬೌಲರ್​ಗಳಿದ್ದು, ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ.

ಸಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು

ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ

ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net