

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ, ಫೋನ್ ಕರೆ ಮೂಲಕ ಕೆಲವರು ಶುಭಾಶಯ ಕೋರಿದ್ದಾರೆ. ಏತನ್ಮಧ್ಯೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಪಿ.ಸಿ. ಮೋಹನ್, ವಿಜಯೇಂದ್ರ ಪಕ್ಷದಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವರ ಆಸೆಗಳು ಸಹಜ. ಹಾಗಂತ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ವಿಜಯೇಂದ್ರಗಿದೆ ಎಂದರು.
ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಜೋರು
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ಹಿನ್ನೆಲೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. ಶಿವಮೊಗ್ಗದ ವಿನೋಬನಗರದಲ್ಲಿರುವ ಯಡಿಯೂರಪ್ಪ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಜೈಕಾರ ಕೂಗಿದ್ದಾರೆ.
ಇನ್ನು ಡಾಲರ್ಸ್ ಕಾಲನಿಯ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ನಿರಾಣಿ, ಸಿದ್ದೇಶ್ವರ್ ಆಗಮಿಸಿ ಬಿ.ವೈ.ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಿದ್ದಾರೆ.