COVID19 ಮೂಲ ಪತ್ತೆ ವಿಚಾರದಲ್ಲಿ ಚೀನಾದ ಮುಕ್ತವಾಗಿದೆ ಎಂದು ಪ್ರಶಂಸಿಸಿದ ಡಬ್ಲ್ಯುಎಚ್​ಒ

WHO
Published on

ಜಿನೇವಾ: ಕರೊನಾ COVID19 ವೈರಸ್​ನ ಮೂಲ ಪತ್ತೆ ಹಚ್ಚುವ ವಿಷಯದಲ್ಲಿ ಅಂತಾರಾಷ್ಟ್ರೀಯ ಪರಿಣತರ ಜತೆಗೆ ಕೆಲಸ ಮಾಡುವ ಮುಕ್ತ ಮನಸ್ಸನ್ನು ಚೀನಾ ಪ್ರದರ್ಶಿಸಿದೆ. ಅದು ಮೆಚ್ಚತಕ್ಕ ವಿಷಯ. ವೈರಸ್​ನ ಮೂಲ ಪತ್ತೆ ಮಾಡುವ ಪರಿಣತರ ತಂಡದಲ್ಲಿ ಎಲ್ಲ ರಾಷ್ಟ್ರದ ಪರಿಣತರೂ ಸರಿಯಾದ ಪ್ರಮಾಣದಲ್ಲಿ ಇರಬೇಕಾದ್ದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ) ಹೇಳಿದೆ.

ಡಬ್ಲ್ಯುಎಚ್​ಒ ಹೆಲ್ತ್ ಎಮರ್ಜೆನ್ಸೀಸ್​ ಪ್ರೋಗ್ರಾಮ್​ನ ಎಕ್ಸಿಕ್ಯೂಟಿವ್​ ಡೈರೆಕ್ಟರ್​ ಮೈಕೆಲ್ ರಿಯಾನ್​ ಜಿನೇವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನಾವು ಚೀನಾದಲ್ಲಿರುವ ನಮ್ಮ ಸಹೋದ್ಯೋಗಿಗಳ ಜತೆಗೆ ನಿತ್ಯವೂ ಮಾತುಕತೆ ನಡೆಸುತ್ತೇವೆ. ವೈರಸ್​ನ ಮೂಲ ಪತ್ತೆ ಹಚ್ಚುವ ವಿಚಾರದಲ್ಲಿ ಅಗತ್ಯ ಸೈಂಟಿಫಿಕ್​ ತನಿಖೆಯನ್ನು ನಾವು ಒಟ್ಟಾಗಿ ಮಾಡುತ್ತಿದ್ದೇವೆ. ಚೀನಾದ ಅಧಿಕಾರಿಗಳು, ಜಗತ್ತಿನ ಎಲ್ಲ ಸರ್ಕಾರಗಳು ಮತ್ತು ನಾವು ಎಲ್ಲರೂ ವೈರಸ್​ನ ಹುಟ್ಟು ಮತ್ತು ಮೂಲ ಅರಿಯುವ ಕುರಿತು ಬಹಳ ಕಾತರರಾಗಿದ್ದೇವೆ. ಈ ವಿಚಾರವಾಗಿ ನಿರಂತರವಾಗಿ ಚೀನಾದಿಂದ ಸಂದೇಶಗಳು ಲಭಿಸುತ್ತಿದ್ದು, ಅಲ್ಲಿಂದ ಬರುತ್ತಿರುವ ಮುಕ್ತ ಮನಸ್ಸಿನ ಸಹಕಾರ ನಮ್ಮ ಇನ್ನಷ್ಟು ಸಂದೇಹಗಳನ್ನು ನಿವಾರಿಸುವುದಕ್ಕೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಹೇಳಿದ್ದಾಗಿ ಕ್ಸಿನ್​ಹುವಾ ವರದಿ ಮಾಡಿದೆ.

ಹೀಗಾಗೀ ಈ ಕುರಿತ ಚರ್ಚೆಗಳನ್ನು ನಾವು ಮುಂದುವರಿಸುವುದಕ್ಕೆ ಬಯಸಿದ್ದೇವೆ. ನಮ್ಮ ಸೈಂಟಿಫಿಕ್ ಮಿಷನ್​ಗೆ ಇದುವರೆಗೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ. ಆದರೆ ಶೀಘ್ರವೇ ವಿವಿಧ ದೇಶಗಳ ಎಲ್ಲ ರೀತಿಯ ಪರಿಣತರನ್ನು ಒಳಗೊಂಡಂತೆ ಒಂದು ತಂಡ ರಚಿಸಿ ಆ ಕೆಲಸ ಶುರುಮಾಡುತ್ತೇವೆ. ಸೈಂಟಿಫಿಕ್ ಜರ್ನಲ್​ಗಳಲ್ಲಿ ಪ್ರಕಟವಾಗುತ್ತಿರುವ ಅಧ್ಯಯನ ವರದಿಗಳ ಪೈಕಿ ಕರೊನಾ ವೈರಸ್​ಗೆ ಸಂಬಂಧಿಸಿದ್ದು ಹೆಚ್ಚಾಗಿ ಚೀನಾದ್ದೇ ಇದೆ. ಚೀನಾ ಹಾಗೂ ಇತರೆ ರಾಷ್ಟ್ರಗಳ ಸಂಸ್ಥೆಗಳ ಸಹಕಾರ, ಸಹಯೋಗದ ಅಧ್ಯಯನಗಳೂ ಇದರಲ್ಲಿ ಸಾಕಷ್ಟಿವೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net