

ನವದೆಹಲಿ: ಭಾರತ-ಚೀನಾ ಮಧ್ಯೆ ಲಡಾಕ್ ವ್ಯಾಪ್ತಿಯ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್(ಎಲ್ಎಸಿ) ಬಳಿಯ ಪ್ಯಾಂಗೊಂಗ್ ತ್ಸೋ ಸರೋವರದ ಬಳಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಘರ್ಷಣೆ ಮುಂದುವರಿದಿದ್ದು, ಯಾವ ಮಾತುಕತೆಗಳೂ ಫಲಪ್ರದವಾಗಿಲ್ಲ. ಎಲ್ಎಸಿಯ ನಾಲ್ಕು ಆಯಕಟ್ಟಿನ ಪ್ರದೇಶಗಳಲ್ಲಿ ಸರಿ ಸುಮಾರು 5,000 ಸೈನಿಕರ ಪಡೆಯನ್ನು ನಿಯೋಜಿಸಿದೆ ಎಂದು ಹೇಳಲಾಗುತ್ತಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಪ್ರಕಾರ, ಈ ಸಲದ ಬಿಕ್ಕಟ್ಟು 73 ದಿನಗಳ ಕಾಲ ನಡೆದ 2017ರ ಡೋಕ್ಲಾಂ ಬಿಕ್ಕಟ್ಟಿಗಿಂತಲೂ ಹೆಚ್ಚು ಕೆಟ್ಟಸ್ಥಿತಿಯಲ್ಲಿದೆ.
ಗಡಿಭಾಗದಲ್ಲಿ ಈ ರೀತಿ ಸೇನೆ ನಿಯೋಜನೆ ಆಗಿರುವುದು ಆ ಭಾಗದಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. ಈ ಸೇನೆ ಒಂದೇ ಕಡೆ ಜಮೆಯಾಗಿಲ್ಲ. ಬದಲಾಗಿ ದಾಳಿ ನಡೆಸುವುದಕ್ಕೆ ಬೇಕಾದ ರೀತಿಯಲ್ಲೇ ತಂತ್ರಗಾರಿಕೆಯಿಂದ ವ್ಯೂಹ ರಚಿಸಿಕೊಂಡು ಆಯಕಟ್ಟಿನ ಪ್ರದೇಶದಲ್ಲಿ ಚದುರಿಕೊಂಡು ಯುದ್ಧ ಸನ್ನದ್ಧ ಸ್ಥಿತಿಯಲ್ಲಿದೆ. ಆ ಭಾಗದಲ್ಲಿ ಚೀನಾ ಸೇನೆ ತಾಲೀಮು ನಡೆಸುತ್ತಿದ್ದು ತನ್ನ ಸೇನಾ ಬಲವನ್ನು ದಾಳಿಗೆ ಉಪಯೋಗಿಸುವುದು ಕಷ್ಟದ ಕೆಲಸವೇನಲ್ಲ. ಚೀನಾದ ಪ್ರತಿಯೊಂದ ನಡೆಯನ್ನೂ ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಪ್ರತಿರೋಧಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸೇನಾ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಚೀನಾಕ್ಕೆ ಬುದ್ಧಿ ಕಲಿಸಲು ಸನ್ನದ್ಧವಾಗಿದೆ ಭಾರತೀಯ ಸೇನೆ
ಈ ನಡುವೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಕಳೆದ ವಾರ ಲಡಾಕ್ ಸಾದಾ ಭೇಟಿ ನೀಡಿದ್ದು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಪಂಗೋಂಗ್ ತ್ಸೋ ಮತ್ತು ಗಲ್ವಾನ್ ಕಣಿವೆಯ ಮೂರು ಪ್ರದೇಶಗಳಲ್ಲಿ ಚೀನಾ ಸೇನೆ ಸರಿ ಸುಮಾರು 100 ಟೆಂಟ್ಗಳನ್ನು ಹಾಕಿದ್ದು, ತಾತ್ಕಾಲಿಕ ಬಂಕರ್ಗಳನ್ನೂ ವಿವಾದಿತ ಪ್ರದೇಶದಲ್ಲಿ ನಿರ್ಮಿಸಿವೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ
ಎಲ್ಎಸಿಯುದ್ದಕ್ಕೂ 5,000 ಸೈನಿಕರ ನಿಯೋಜನೆ ಕುರಿತು ವಿವರಣೆ ನೀಡಿರುವ ಸೇನೆಯ ಮಾಜಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ, ಎಲ್ಎಸಿಯಲ್ಲಿ 5,000 ಯೋಧರನ್ನು ನಿಯೋಜಿಸಲು ಜಾಗ ಇರಲ್ಲ. ಅದಕ್ಕೆ ಅವರು ಅಲ್ಲಲ್ಲಿ ಯೋಧರನ್ನು ನಿಯೋಜಿಸಿದ್ದಾರೆ. ಅದು ಸಹಜ ಕೂಡ. ಈ ರೀತಿ ಪ್ರದೇಶಗಳನ್ನು ಡೆತ್ ಏರಿಯಾ ಎಂದೂ ಹೇಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಸೇನೆ ನಿಯೋಜನೆ ಅಷ್ಟೇ ಆದರೆ ಸ್ವಲ್ಪ ಬಿಗುವಿನ ವಾತಾವರಣ ಇರುತ್ತದೆಯಾದರೂ, ಇವೆಲ್ಲವೂ ಮಾತುಕತೆಯ ಮೂಲಕ ಬಗೆಹರಿಸಬಹುದಾದ ಬಿಕ್ಕಟ್ಟೇ ಆಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)