

Asaduddin Owaisi : ಕಾಶ್ಮೀರದ ಪಹಲ್ಗಾಮ್ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಪಾಕಿಸ್ತಾನದ ವಿರುದ್ಧ ಬಲವಾದ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ ಮತ್ತು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ಭದ್ರತೆ ಕುರಿತು ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಓವೈಸಿ ಸ್ವಾಗತಿಸಿದ್ದಾರೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ದೇಶದ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯಬಾರದು ಎಂದು ಹೇಳಿದ್ದಾರೆ.
1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಓವೈಸಿ, ಈ ದಿಟ್ಟ ಕ್ರಮವನ್ನು ಸ್ವಾಗತಿಸಿದರು. ಆದರೆ, ಸರ್ಕಾರವು ನೀರನ್ನು ಎಲ್ಲಿ ಸಂಗ್ರಹಿಸುತ್ತದೆ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಇದು ರಾಜಕೀಯ ವಿಷಯವಲ್ಲ ಎಂದು ಓವೈಸಿ ಹೇಳಿದರು.
ಪಹಲ್ಗಾಮ್ ದಾಳಿಗೆ ಬಲವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಅಂತಾರಾಷ್ಟ್ರೀಯ ಕಾನೂನು ಭಾರತಕ್ಕೆ ನೀಡಿದೆ ಎಂದು ಓವೈಸಿ ಹೇಳಿದರು. ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುವ ರಾಷ್ಟ್ರದ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಸ್ವರಕ್ಷಣೆಗಾಗಿ ವಾಯು ಮತ್ತು ನೌಕಾ ದಿಗ್ಬಂಧನ ವಿಧಿಸಲು ಮತ್ತು ಅವರಿಗೆ ಶಸ್ತ್ರಾಸ್ತ್ರ ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಲು ಅಂತಾರಾಷ್ಟ್ರೀಯ ಕಾನೂನು ನಮಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.
ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭದ್ರತಾ ಪ್ರತಿಕ್ರಿಯೆಯಲ್ಲಿನ ವಿಳಂಬದ ಬಗ್ಗೆಯೂ ಓವೈಸಿ ಪ್ರಶ್ನೆಗಳನ್ನು ಎತ್ತಿದರು. ಬೈಸರನ್ ಹುಲ್ಲುಗಾವಲಿನಲ್ಲಿ ಸಿಆರ್‌ಪಿಎಫ್ ಅನ್ನು ಏಕೆ ನಿಯೋಜಿಸಿಲ್ಲ? ತ್ವರಿತ ಪ್ರತಿಕ್ರಿಯೆ ತಂಡವು ಅಲ್ಲಿಗೆ ತಲುಪಲು ಒಂದು ಗಂಟೆ ಏಕೆ ತೆಗೆದುಕೊಂಡಿತು? ಜನರ ಧರ್ಮವನ್ನು ಕೇಳಿ ಅವರು ಗುಂಡು ಹಾರಿಸಿದ್ದಾರೆ. ಹತ್ಯೆಗಳನ್ನು ಗುರಿಯಾಗಿರಿಸಿಕೊಂಡು ನಡೆಸಲಾಗಿದೆ. ಇದು ಆಳವಾದ ಕೋಮುವಾದಿ ಮನಸ್ಥಿತಿ ಎಂದು ಓವೈಸಿ ಹೇಳಿದರು.
ಮೂಲಗಳ ಪ್ರಕಾರ, ಸರ್ಕಾರವು ಸರ್ವಪಕ್ಷ ಸಭೆಯಲ್ಲಿ, ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ಲೋಪಗಳಾಗಿವೆ ಎಂದು ಒಪ್ಪಿಕೊಂಡಿತು. ಏನೂ ತಪ್ಪಾಗಿಲ್ಲದಿದ್ದರೆ, ನಾವು ಇಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದೆವು? ಎಲ್ಲೋ ಕೆಲವು ಕಡೆ ಲೋಪಗಳಾಗಿವೆ. ಅದನ್ನು ನಾವು ಕಂಡುಹಿಡಿಯಬೇಕು ಎಂದು ಆಡಳಿತ ಪಕ್ಷದ ನಾಯಕರೊಬ್ಬರು ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೇಳಿದರು ಎಂದು ವರದಿಯಾಗಿದೆ.
ಭಯೋತ್ಪಾದಕರನ್ನು ಬಲವಾಗಿ ಖಂಡಿಸಿದ ಓವೈಸಿ ಅವರು, ಕಾಶ್ಮೀರಿಗಳು ಮತ್ತು ಕಣಿವೆಯ ವಿದ್ಯಾರ್ಥಿಗಳ ವಿರುದ್ಧ "ಸುಳ್ಳು ಪ್ರಚಾರ" ನಿಲ್ಲಿಸುವಂತೆಯೂ ಮನವಿ ಮಾಡಿದರು. ಭಯೋತ್ಪಾದಕರು ಅವರ ಧರ್ಮದ ಬಗ್ಗೆ ಕೇಳುವ ಮೂಲಕ ಜನರನ್ನು ಕೊಂದ ರೀತಿಯನ್ನು ನಾನು ಖಂಡಿಸುತ್ತೇನೆ ಎಂದರು. (ಏಜೆನ್ಸೀಸ್)