

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿನ ನೈತಿಕ ಪೊಲೀಸ್ ಗಿರಿ ವಿರುದ್ಧ ದನಿ ಎತ್ತಿರುವ ಮಾಜಿ ಸಚಿವ ಯು.ಟಿ. ಖಾದರ್ ತಮ್ಮ ಅಧಿಕಾರಾವಧಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾಲಿಬಾನ್ ಅಂತ ಆಗಲಿಕ್ಕೆ ಗನ್ ಬೇಕಂತೇನೂ ಇಲ್ಲ. ಕೆಟ್ಟ ಶಬ್ದಗಳಿಂದ ಬಯ್ಯುವುದು, ಇನ್ನೊಬ್ಬರಿಗೆ ನೋವಾಗುವಂತೆ ಮಾತನಾಡುವುದು ಕೂಡ ತಾಲಿಬಾನ್ ಸಂಸ್ಕೃತಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬೇರೆಯವರ ಮಕ್ಕಳಿಗೆ ಹೊಡೆಯಲು ಇವರಿಗೆ ಅವಕಾಶ ಕೊಟ್ಟಿದ್ದು ಯಾರು? ಎಂದು ನೈತಿಕ ಪೊಲೀಸ್ಗಿರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾನು ಸಚಿವನಾಗಿದ್ದಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೌಡಿಗಳು ಹೆದರುತ್ತಿದ್ದರು ಎಂಬುದನ್ನೂ ಹೇಳಿಕೊಂಡಿದ್ದಾರೆ.
ಆಗ ಸಂದೀಪ್ ಪಾಟೀಲ್ ಮಂಗಳೂರು ನಗರ ಕಮೀಷನರ್ ಆಗಿದ್ದರು. ಸಂದೀಪ್ ಪಾಟೀಲ್ ರೌಡಿಗಳಿಗೆ ಶೂಟ್ ಮಾಡಿ ಹದ್ದುಬಸ್ತಿನಲ್ಲಿ ಇಟ್ಟಿದ್ದರು. ಆಗ ನನ್ನ ಮನೆಗೆ ರೌಡಿಗಳು ಬಂದು ಬಿಟ್ಟು ಬಿಡಿ ಅಂತ ಹೇಳುತ್ತಿದ್ದರು. 2008ರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಸ್ಥಿತಿ ಇತ್ತು. ಆಗ ಡಿಸಿ ಪೊನ್ನುರಾಜ್, ಪೊಲೀಸ್ ಕಮಿಷನರ್ ಸುಬ್ರಹ್ಮಣ್ಯ ದಿಟ್ಟ ಕ್ರಮ ಕೈಗೊಂಡಿದ್ದರು ಎಂದಿರುವ ಖಾದರ್, ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಡಬೇಕು, ನೈತಿಕ ಪೊಲೀಸ್ ಗಿರಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.