

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವುದರಿಂದ ಮೈಸೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಇಂದು ಮೈಸೂರು ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ವಿದೇಶಿಯರು ಮೈಸೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರೆ ಅಂತಹವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೈಸೂರು ಪ್ರಮುಖ ಪ್ರವಾಸಿ ತಾಣ, ಹಾಗಾಗಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದ್ದೇನೆ ಎಂಬುದಾಗಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಗ್ಯಾಂಬ್ಲಿಂಗ್ನಿಂದಾಗಿ ಬಹುತೇಕ ಮಂದಿ ಹಣ ಕಳೆದುಕೊಂಡು ತೊಂದರೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಗ್ಯಾಂಬ್ಲಿಂಗ್ ತಡೆಗಟ್ಟಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆನ್ಲೈನ್ ಜೂಜಿಗೂ ಕಡಿವಾಣ ಹಾಕಲಾಗುತ್ತದೆ. ಹಣ ಇಟ್ಟು ಆಡುವ ಎಲ್ಲ ರೀತಿಯ ಜೂಜುಗಳನ್ನು ನಿಷೇಧಿಸಲಾಗುತ್ತದೆ. ರಿಕ್ರಿಯೇಷನ್ ಕ್ಲಬ್ಗಳ ಮೇಲೂ ಪೊಲೀಸರು ದಾಳಿ ನಡೆಸಿ ಜೂಜಿಗೆ ಕಡಿವಾಣ ಹಾಕಬೇಕು. ಕ್ರಿಕೆಟ್ ಬೆಟ್ಟಿಂಗ್ ತಡೆಗಟ್ಟುವ ಸಲುವಾಗಿ ಸಂಬಂಧಿಸಿತ ವೆಬ್ಸೈಟ್ ಬ್ಲಾಕ್ ಮಾಡಲಾಗುತ್ತದೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರು ಹುಕ್ಕಾ ಬಾರ್ ಕುರಿತು ಕೇಳಿದ ಪ್ರಶ್ನೆಗೆ ಸಚಿವರ ಪ್ರತಿಕ್ರಿಯೆ ಒಮ್ಮೆ ಎಲ್ಲರೂ ಕಣ್ಣರಳಿಸಿ ನೋಡುವಂತಾಗಿತ್ತು. ಮೈಸೂರಿನ ಹುಕ್ಕಾ ಬಾರ್ ದಂಧೆ ಬಗ್ಗೆ ಸುದ್ದಿಗಾರರ ಸರಣಿ ಪ್ರಶ್ನೆಗಳಿಂದಾಗಿ ಗೃಹ ಸಚಿವರು ತಬ್ಬಿಬ್ಬಾದರು. ಮಾತ್ರವಲ್ಲ 'ಹುಕ್ಕಾ ಬಾರ್ ಅಂದ್ರೆ ಏನು? ಅದು ಹೇಗಿರುತ್ತೆ?' ಎಂದು ಕೇಳುವ ಮೂಲಕ ಅಚ್ಚರಿಯನ್ನೂ ಮೂಡಿಸಿದರು. ಆಗ ಮೈಸೂರು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರು ಹುಕ್ಕಾ ಬಾರ್ ಕುರಿತ ಮಾಹಿತಿಯನ್ನು ಸಚಿವರ ಕಿವಿಯಲ್ಲಿ ಪಿಸುಗುಟ್ಟಿದರು.
ಬಳಿಕ ಮತ್ತೆ ಪ್ರತಿಕ್ರಿಯಿಸಿದ ಸಚಿವರು, ಹುಕ್ಕಾ ಬಾರ್ಗಳನ್ನೂ ಬಂದ್ ಮಾಡಿಸಲಾಗುತ್ತದೆ. ಹುಕ್ಕಾ ಬಾರ್ಗಳಿಗೆ ನಗರಪಾಲಿಕೆ ಪರವಾನಗಿ ನೀಡಿರುವ ಬಗ್ಗೆ ಮಾಹಿತಿ ಇದೆ. ಹುಕ್ಕಾ ಬಾರ್ಗಳಲ್ಲಿ ಮಾದಕ ವಸ್ತುಗಳ ಸೇವನೆ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಬಂದ್ ಮಾಡಿಸಬೇಕು ಎಂದೂ ಹೇಳಿದರು.