

ನಮ್ಮಲ್ಲಿ ಹೆಚ್ಚಿನವರು ತಾವು ಬಯಸಿ ಅಥವಾ ಬಯಸದಿದ್ದರೂ ಒಂದು ಹಂತದಲ್ಲಿ ಮದುವೆಯಾಗಲು ಒತ್ತಡವನ್ನು ಅನುಭವಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಎಲ್ಲರೂ ಮದುವೆಯ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸುತ್ತಾರೆ. ಕುಟುಂಬ ಸದಸ್ಯರು ಸಹ ಆರಂಭಿಕ ವಿವಾಹದ(Marriage) ಪ್ರಯೋಜನಗಳ ಬಗ್ಗೆ ಆಲೋಚಿಸಲು ಪ್ರಾರಂಭಿಸುತ್ತಾರೆ.
ಉದಾಹರಣೆಗೆ ನೀವು ಬೇಗನೆ ಮದುವೆಯಾದರೆ ನಿಮ್ಮ ಕುಟುಂಬವನ್ನು ಸರಿಯಾದ ಸಮಯದಲ್ಲಿ ಯೋಜಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಹೊಸ ಜೀವನವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ ಎಂದು ಜನರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಆದರೆ ಇಂದಿನ ಕಾಲಘಟ್ಟದಲ್ಲಿ ತಮ್ಮ ವೃತ್ತಿಯ ಜಂಜಾಟದಿಂದ ವಯಸ್ಸು ಹೆಚ್ಚಾಗುತ್ತದೆ ಆದರೆ ಮದುವೆ ಆಗಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ಜತೆಗೆ ಸಮಾಜವೂ ಅವರ ಮೇಲೆ ಒತ್ತಡ ಹೇರಲು ಆರಂಭಿಸುತ್ತದೆ.
ಹಾಗಾದ್ರೆ ಮದುವೆಗೆ ಸರಿಯಾದ ವಯಸ್ಸು ಯಾವುದು? ನಿಖರವಾದ ಉತ್ತರ ಇಲ್ಲದೆ ಇಂದಿಗೂ ಇದು ಪ್ರಶ್ನೆಯಾಗಿಯೇ ಉಳಿದಿದೆ. ಇಂದಿನ ಯುವಕರಿಗೆ ಈ ಕುರಿತು ಪ್ರಶ್ನಿಸಿದರೆ ಬಹುತೇಕ ಮಂದಿ 30 ವರ್ಷದ ಬಳಿಕ ಮದುವೆಯಾಗುವುದಾಗಿ ತಿಳಿಸುತ್ತಾರೆ. ಆದ್ದರಿಂದ 30 ವರ್ಷದಲ್ಲಿ ಮದುವೆಯಾಗುವುದರಿಂದ ಏನೆಲ್ಲಾ ಪ್ರಯೋಜನ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.