

Glutathione Injections: ಸ್ಯಾಂಡಲ್ವುಡ್ನ ‘ಹುಡುಗರು’ ಚಿತ್ರದಲ್ಲಿ ‘ತೊಂದ್ರೆ ಇಲ್ಲ ಪಂಕಜಾ’ ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿ, ಕನ್ನಡಿಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ ಬಾಲಿವುಡ್ ಬೆಡಗಿ ಶೆಫಾಲಿ ಜರಿವಾಲಾ (42) ಜೂ.27ರ ತಡರಾತ್ರಿ ಹಠಾತ್ ಹೃದಯಾಘಾತಕ್ಕೆ ಕೊನೆಯುಸಿರೆಳೆದರು. ನಟಿಯ ಅಕಾಲಿಕ ಸಾವಿನ ಬೆನ್ನಲ್ಲೇ ಹಲವು ಶಾಕಿಂಗ್ ಸಂಗತಿಗಳು ಹೊರಬಂದಿದ್ದು, ನಟಿ ತೆಗೆದುಕೊಂಡ ಇಂಜೆಕ್ಷನ್ ಮತ್ತು ಇತರೆ ವಸ್ತುಗಳ ಬಳಕೆಯೇ ಕಾರಣ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ನಟಿಯ ಸಾವಿಗೆ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಇದಿನ್ನೂ ತನಿಖೆ ಹಂತದಲ್ಲಿದೆ. ಶೆಫಾಲಿ ಸಾವಿನ ಬೆನ್ನಲ್ಲೇ ಗ್ಲುಟಾಥಿಯೋನ್ ಇಂಜೆಕ್ಷನ್ ಪದವು ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಈ ಪದ ಇತ್ತೀಚೆಗೆ ಬಾಲಿವುಡ್‌ನಲ್ಲಿ ತೆರೆಕಂಡ 'ಮೇಡ್ ಇನ್ ಹೈವೇ ಸೀಸನ್ 2' ಚಿತ್ರದ ಬಳಿಕ ಹೆಚ್ಚು ಟ್ರೆಂಡಿಂಗ್ ಆಗುತ್ತಿದೆ. ಶೆಫಾಲಿ ಜರಿವಾಲಾ ಅವರೊಂದಿಗೆ ಈ ಪದವು ಸೇರ್ಪಡೆಯಾಗಿದ್ದು, ಹಲವರಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ. ಅಷ್ಟಕ್ಕೂ ಈ ಗ್ಲುಟಾಥಿಯೋನ್ ಎಂದರೇನು? ಇದರ ಉಪಯೋಗವೇನು? ಎಂಬುದರ ವಿವರ ಹೀಗಿದೆ ನೋಡಿ.
ಗ್ಲುಟಾಥಿಯೋನ್ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಉತ್ಕರ್ಷಣ ನಿರೋಧಕ. ಇದು ಸಿಸ್ಟೀನ್, ಗ್ಲುಟಮೇಟ್ ಮತ್ತು ಗ್ಲೈಸಿನ್‌ನಂತಹ ಅಮೈನೋ ಆಮ್ಲಗಳ ಮಿಶ್ರಣದಿಂದ ಮಾಡಲ್ಪಟ್ಟಿದೆ. ಇದನ್ನು ಲಿವರ್ ನಿರ್ವಿಶೀಕರಣ, ಕೀಮೋಥೆರಪಿ ಬೆಂಬಲ ಮತ್ತು ಆಲ್ಝೈಮರ್/ಪಾರ್ಕಿನ್ಸನ್‌ನಂತಹ ಕಾಯಿಲೆಗಳ ಚಿಕಿತ್ಸೆಯಲ್ಲಿ ವೈದ್ಯಕೀಯವಾಗಿ ಬಳಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಇದನ್ನು ಚರ್ಮದ ಸೌಂದರ್ಯಕ್ಕೂ ಬಳಕೆ ಮಾಡಲಾಗುತ್ತಿದೆ. ಚರ್ಮವನ್ನು ಬಿಳಿ ಬಣ್ಣಕ್ಕೆ ತಿರುಗಿಸಲು ಮತ್ತು ಯೌವನವನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತದೆ.
ವಿಶೇಷವಾಗಿ, ಚಲನಚಿತ್ರೋದ್ಯಮದ ಕಲಾವಿದರು ಮತ್ತು ಸೋಷಿಯಲ್ ಮೀಡಿಯಾ ಪ್ರಭಾವಿಗಳು ಇದನ್ನು ಆಕರ್ಷಕ ಮತ್ತು ಸುಂದರವಾಗಿ ಕಾಣಲು ಬಳಸುತ್ತಿದ್ದಾರೆ. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಇದೊಂದು ಪ್ರವೃತ್ತಿಯಾಗಿ ಮಾರ್ಪಟ್ಟಿದೆ.
ಶೆಫಾಲಿ ಜರಿವಾಲಾ ಸಾವಿನ ತನಿಖೆಯ ಸಮಯದಲ್ಲಿ ಆಘಾತಕಾರಿ ಸಂಗತಿಗಳು ಹೊರಬಿದ್ದಿದ್ದು. ನಟಿ ಗ್ಲುಟಾಥಿಯೋನ್ ಇಂಜೆಕ್ಷನ್ ಮತ್ತು ಯೌವನವನ್ನು ಕಾಪಾಡಿಕೊಳ್ಳುವಂತ ಔಷಧಿಗಳನ್ನು ಬಳಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳಲ್ಲಿ ತಿಳಿದುಬಂದಿದೆ. ಅವರ ಅಕಾಲಿಕ ಸಾವಿಗೆ ಇವುಗಳ ಮಿತಿಮೀರಿದ ಬಳಕೆಯೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).