ರಂಜಿಸುವುದಕ್ಕಿಂತ ದೊಡ್ಡ ಹಬ್ಬ ಮತ್ತೊಂದಿಲ್ಲ: ಇದ್ದಲ್ಲಿಯೇ ನನ್ನ ಬರ್ತ್‌ಡೇ ಆಚರಿಸಿ ಎಂದು ಅಭಿಮಾನಿಗಳಿಗೆ ಗಣೇಶ್ ಮನವಿ

gani
Published on

ಬೆಂಗಳೂರು: ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಟ ಗಣೇಶ್ ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೇ ಖುಷಿಯಲ್ಲಿರುವ ಅವರು ಬುಧವಾರ (ಜು. 2) 47ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿ ಹುಟ್ಟುಹಬ್ಬದಂದು ಗಣೇಶ್ ಶೂಟಿಂಗ್‌ನಲ್ಲಿ ತೊಡಗಲಿದ್ದು, ಹೀಗಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಶೂಟಿಂಗ್ ಸೆಟ್‌ನಲ್ಲಿಯೇ ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಗಳೂರು ನಿವಾಸಕ್ಕೆ ಆಗಮಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದು, ಇದ್ದಲ್ಲಿಯೇ ಸಾಮಾಜಿಕ ಕಾರ್ಯಗಳ ಮೂಲಕ ಬರ್ತ್‌ಡೇ ಆಚರಿಸಿ ಎಂದು ವಿನಂತಿಸಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಗಣೇಶ್, ‘ಜುಲೈ 2 ನಾನು ಹುಟ್ಟಿದ ದಿನ. ಸಹಜವಾಗಿ ನನಗದು ನಿಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಅತ್ಯಂತ ಸಮೀಪದಿಂದ ಕಣ್ತುಂಬಿಕೊಂಡು ಸಂಭ್ರಮಿಸುವ ದಿನ. ಆದರೆ, ಈ ಬಾರಿ ನಾನು ‘ಪಿನಾಕ’ ಹಾಗೂ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರಗಳ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಬೇಕಿರುವ ಕಾರಣ ಈ ಬಾರಿ ನಿಮ್ಮೆಲ್ಲರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಯಾರೂ ಮನೆಯ ಬಳಿ ಬರದೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತಾವುಗಳು ಇದ್ದಲ್ಲಿಂದಲೇ ನನಗೆ ಆಶಿಸಿ, ಆಶೀರ್ವದಿಸಿ’ ಎಂದು ಮನವಿ ಮಾಡಿದ್ದಾರೆ.

ಲೈನಪ್‌ನಲ್ಲಿವೆ ಐದು ಸಿನಿಮಾಗಳು: ಗಣೇಶ್ ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ನೃತ್ಯ ನಿರ್ದೇಶಕ ಧನಂಜಯ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಪಿನಾಕ’ ಹಾಗೂ ‘ಪುಷ್ಪಕ ವಿಮಾನ’, ‘ಮಾನ್ಸೂನ್ ರಾಗ’ ಚಿತ್ರಗಳ ನಿರ್ಮಾಪಕ ಎ.ಆರ್.ವಿಖ್ಯಾತ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರಗಳ ಶೂಟಿಂಗ್‌ನಲ್ಲಿ ಗಣೇಶ್ ಬಿಜಿಯಾಗಿದ್ದಾರೆ. ಈ ಎರಡು ಚಿತ್ರಗಳಲ್ಲೂ ಗಣೇಶ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಹುಟ್ಟುಹಬ್ಬದ ನಿಮಿತ್ತ ಈ ಚಿತ್ರತಂಡಗಳಿಂದ ಹೊಸ ಮಾಹಿತಿ ನಿರೀಕ್ಷಿಸಬಹುದು.

ಅರಸು, ರಾಜು ಜತೆ ಭರ್ಜರಿ ಗಣಪ: ‘ಪಿನಾಕ’, ‘ ಯುವರ್ಸ್ ಸಿನ್ಸಿಯರ್ಲಿ ರಾಮ್’ ಜತೆ ಗಣೇಶ್ ಇನ್ನೂ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಅರಸು ಅಂತಾರೆ ನಿರ್ದೇಶನದ ಹೆಸರಿಡದ ಚಿತ್ರದ ಮುಹೂರ್ತ ಕಳೆದ ಏಪ್ರಿಲ್‌ನಲ್ಲಿ ನೆರವೇರಿದ್ದು, ಒಂದು ಹಂತದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿವಾಸರಾಜು ಜತೆ ‘ಮಳೆ’ ಹುಡುಗ ಮತ್ತೆ ಒಂದಾಗಿದ್ದು, ಕೆಲ ದಿನಗಳ ಹಿಂದಷ್ಟೇ ಸಿನಿಮಾ ಘೋಷಣೆಯಾಗಿದೆ. ಇನ್ನು ‘ಭರ್ಜರಿ’ ಚೇತನ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲೂ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂರು ಚಿತ್ರಗಳ ಟೈಟಲ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net