9k ಗೋಲ್ಡ್ ಬೆಲೆ ಎಷ್ಟು ಕಡಿಮೆ? ಏನಿದು ಹಾಲ್​ಮಾರ್ಕ್​ ಚಿನ್ನ? ಇಲ್ಲಿದೆ ಪೂರ್ಣ ವಿವರ | 9K Gold Price

ವಿಜಯವಾಣಿ - 2025-08-22T173554.157
Published on

9K Gold Price: ಇತ್ತೀಚಿನ ದಿನಗಳಲ್ಲಿ ಚಿನ್ನ ಖರೀದಿ ದೂರದ ಮಾತಾಗಿದೆ. ಮಧ್ಯಮ ವರ್ಗದ ಜನರಿಗಂತು ಚಿನ್ನ ಕೊಳ್ಳುವಿಕೆ ಕನಸಾಗಿಬಿಟ್ಟಿದೆ. ಅದಕ್ಕೆ ಕಾರಣ, 1 ಲಕ್ಷ ರೂ. ಗಡಿದಾಟಿ ಹೋಗಿರುವ ಗೋಲ್ಡ್​ ಬೆಲೆ. ಚಿನ್ನ ದಿನೇ ದಿನೇ ದುಬಾರಿಯಾಗುತ್ತಿದೆ. ಅದರಲ್ಲಿ ಎರಡನೇ ಮಾತಿಲ್ಲ. ಆದರೆ, ಕಳೆದ ಒಂದೆರೆಡು ವಾರಗಳಿಂದ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದು 24 ಕ್ಯಾರೆಟ್​ ಚಿನ್ನದ ದರದ ವಿಷಯ. ಅಸಲಿಗೆ, ಸಾಮಾನ್ಯ ಜನರು ಖರೀದಿಸುವ 9K ಹಾಲ್​ಮಾರ್ಕ್​ ಚಿನ್ನದ ದರವೆಷ್ಟು? ಏನಿದು 9k ಗೋಲ್ಡ್​? ಎಂಬುದರ ವಿವರ ಹೀಗಿದೆ ನೋಡಿ.

ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನದ ಮಾರಾಟ ಎಂದಿಗಿಂತ ದುಪ್ಪಟ್ಟಾಗುತ್ತದೆ. ಬಹುತೇಕರು ಈ ಸಮಯದಲ್ಲಿ ಚಿನ್ನದ ಖರೀದಿಯಲ್ಲಿ ತೊಡಗಲು ಬಯಸುತ್ತಾರೆ. ಶುಭ ಸಂದರ್ಭಗಳಲ್ಲಿ ಚಿನ್ನ ಅವಶ್ಯ. ಇದಲ್ಲದೆ, ಜನರು ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ಹೊಂದಿರುವುದು ಗಮನಾರ್ಹ.

9K ಚಿನ್ನದ ಬೆಲೆ: ಮಾರಾಟವು ಶೇ.60ರಷ್ಟು ಕುಸಿತ

ವಾಸ್ತವವಾಗಿ, ಕಳೆದ ಜೂನ್‌ನಲ್ಲಿ ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟವು ಶೇ.60ರಷ್ಟು ಕುಸಿತ ಕಂಡಿದೆ. ಇದು ಖರೀದಿದಾರರು ಚಿನ್ನವನ್ನು ಖರೀದಿಸುವುದು ಎಷ್ಟು ಕಷ್ಟ ಎಂಬುದನ್ನು ಸೂಚಿಸಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು, ಭಾರತ ಸರ್ಕಾರವು ಈಗ 9 ಕ್ಯಾರೆಟ್ (9K) ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಅನ್ನು ಅನುಮೋದಿಸಿದೆ. ಇದು ಖರೀದಿದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ. ಇದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವ್ಯವಸ್ಥೆಯಡಿಯಲ್ಲಿ ಅಧಿಕೃತವಾಗಿ ಗುರುತಿಸಲಾಗುತ್ತದೆ.

ಹಾಲ್‌ಮಾರ್ಕಿಂಗ್ ಶುದ್ಧತೆಯ ಗುರುತು. ಹಾಲ್‌ಮಾರ್ಕ್ ಇದ್ದರೆ, ಅದನ್ನು ಶುದ್ಧ ಎಂದು ಗುರುತಿಸಬಹುದು. ಇಲ್ಲಿಯವರೆಗೆ, ಬಿಐಎಸ್ 14k, 18k, 20k, 22k, 23k, 24k ಚಿನ್ನದಂತಹ ಶುದ್ಧತೆಯನ್ನು ಗುರುತಿಸಿದೆ. ಈಗ ಈ ಪಟ್ಟಿಗೆ 9k ಚಿನ್ನವನ್ನು ಕೂಡ ಸೇರಿಸಲಾಗಿದೆ. ಈಗ, ಆಭರಣ ವ್ಯಾಪಾರಿಗಳು ಈ ಕಡಿಮೆ ಶುದ್ಧತೆಯ 9k ಆಭರಣಗಳನ್ನು ಸರ್ಕಾರದ ಭರವಸೆಯೊಂದಿಗೆ ಮಾರಾಟ ಮಾಡಬಹುದು.

9k ಚಿನ್ನಕ್ಕೂ 24 ಕ್ಯಾರೆಟ್​ಗೂ ಏನು ವ್ಯತ್ಯಾಸ?

24 ಕ್ಯಾರೆಟ್​ ಚಿನ್ನವು ಅತ್ಯಂತ ಶುದ್ಧವಾಗಿದೆ. ಇದು ಶೇ.99.9ರಷ್ಟು ಚಿನ್ನವನ್ನು ಹೊಂದಿದೆ. 9 ಕ್ಯಾರೆಟ್​ ಚಿನ್ನವು ಕೇವಲ ಶೇ.37.5ರಷ್ಟು ಚಿನ್ನವನ್ನು ಹೊಂದಿರುತ್ತದೆ. ಉಳಿದ ಮೊತ್ತ (ಶೇ.62.5ರಷ್ಟು) ತಾಮ್ರ, ಬೆಳ್ಳಿ ಅಥವಾ ಸತುವುಗಳಂತಹ ಇತರ ಲೋಹಗಳ ಮಿಶ್ರಲೋಹದಿಂದ ಬರುತ್ತದೆ. 9 ಕ್ಯಾರೆಟ್​ ಚಿನ್ನವನ್ನು ಅಗ್ಗ ಬೆಲೆಗೆ ಖರೀದಿಸಬಹುದು. ಇದು ಹೆಚ್ಚು ಕಾಲ ಬಾಳಿಕೆಯೂ ಬರುತ್ತದೆ. ಏಕೆಂದರೆ, ಲೋಹಗಳು ಆಭರಣಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಹೆಚ್ಚಿನ ಕ್ಯಾರೆಟ್ ತುಣುಕುಗಳಿಗಿಂತ ಬಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

9 ಕ್ಯಾರೆಟ್​ ಚಿನ್ನ ಖರೀದಿ ಏಕೆ?

ಪ್ರಸ್ತುತ, ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಳ ಕಂಡಿದೆ. ಸಾಮಾನ್ಯ ಜನರು ದುಬಾರಿ ದರದಲ್ಲಿರುವ ಗೋಲ್ಡ್​ ಖರೀದಿಸುವ ಸ್ಥಿತಿಯಲ್ಲಿಲ್ಲ. ಆಭರಣಗಳ ಮಾರಾಟವೂ ತೀವ್ರವಾಗಿ ಕುಸಿದಿದೆ. ಈ ಸಂದರ್ಭಗಳಲ್ಲಿ, ಸಮಂಜಸ ಬೆಲೆಗೆ ಚಿನ್ನವನ್ನು ಖರೀದಿಸಲು ಇದು ಉತ್ತಮ ಆಯ್ಕೆ ಎಂದರೆ ಖಂಡಿತ ತಪ್ಪಾಗಲಾರದು. ಆದಾಗ್ಯೂ, 9K ಚಿನ್ನವು ಒಂದು ಗ್ರಾಂಗೆ ಸುಮಾರು 3,700 ರೂ. ಇದೆ.

ಕಳ್ಳತನದಿಂದ ಸುರಕ್ಷಿತ!

ಇದು ಅತೀ ಕಡಿಮೆ ಚಿನ್ನವನ್ನು ಹೊಂದಿದೆ. ಹೆಚ್ಚಿನ ಮೌಲ್ಯದ ಆಭರಣಗಳಿಗೆ ಹೋಲಿಸಿದರೆ, ಕಳ್ಳರು ಇಂತಹ ಆಭರಣಗಳನ್ನು ಕದಿಯುವ ಸಾಧ್ಯತೆ ಬಹಳ ಕಡಿಮೆಯೇ. ಇದು ನೋಡಲು ಆಕರ್ಷಕವಾಗಿದೆ ಹಾಗೂ ಕೈಗೆಟುಕುವ ದರದಲ್ಲಿಯೂ ಇದೆ.

ಏನಿದು ಹಾಲ್‌ಮಾರ್ಕಿಂಗ್?

ಚಿನ್ನ ಖರೀದಿದಾರರಿಗೆ ಹಾಲ್‌ಮಾರ್ಕಿಂಗ್ ಬಹಳ ಮುಖ್ಯ. ನೀವು ಖರೀದಿಸುವ ಚಿನ್ನವು ಅಸಲಿಯದ್ದೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಹಾಲ್‌ಮಾರ್ಕಿಂಗ್ ಅವಶ್ಯ. ಈಗ 9K ಚಿನ್ನ ಅಧಿಕೃತವಾಗಿ ಹಾಲ್‌ಮಾರ್ಕಿಂಗ್ ವ್ಯವಸ್ಥೆಗೆ ಒಳಪಟ್ಟಿದೆ. ಹೀಗಾಗಿಯೇ ಗ್ರಾಹಕರು ವಂಚನೆ ಅಥವಾ ನಕಲಿ ಶುದ್ಧತೆಯ ಬಗ್ಗೆ ಚಿಂತಿಸದೆ ಅಗ್ಗದ ಬೆಲೆಗೆ ಆಭರಣಗಳನ್ನು ಖರೀದಿಸಬಹುದಾಗಿದೆ.

ಮತ್ತೊಂದೆಡೆ, ಹಬ್ಬ ಮತ್ತು ಮದುವೆಯ ಸೀಸನ್​ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ, ಚಿನ್ನದ ಮಾರಾಟ ಮತ್ತೆ ಪುಟಿದೇಳುವ ನಿರೀಕ್ಷೆಯಿದೆ. 22K ಮತ್ತು 24 ಕ್ಯಾರೆಟ್​ ಚಿನ್ನವನ್ನು ಖರೀದಿಸುವುದು ಕಷ್ಟಕರವಾಗಿರುವ ಸಮಯದಲ್ಲಿ, 9K ಆಭರಣಗಳತ್ತ ಜನ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net