

Shreyas Iyer: ಇದೇ ಸೆ.09ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ಇದೀಗ ಭಾರತ ತಂಡ ಪ್ರಕಟವಾಗಿದೆ. ಸೂರ್ಯಕುಮಾರ್ ಯಾದವ್ ನಾಯಕನಾದರೆ, ಶುಭಮನ್ ಗಿಲ್ ಉಪನಾಯಕನಾಗಿ ಅಖಾಡಕ್ಕಿಳಿಯಲಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಯಾಪ್ಟನ್ ಆಗಿ ಅದ್ಭುತ ಪ್ರದರ್ಶನ ನೀಡಿದ ಗಿಲ್ಗೆ ಇದೀಗ ಬಿಸಿಸಿಐ ವಿಶೇಷ ಮನ್ನಣೆ ನೀಡಿರುವುದು ಹಲವರ ಹುಬ್ಬೇರಿಸಿದೆ. ಇದರ ಮಧ್ಯೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ರನ್ನು ತಂಡದಿಂದ ಕೈಬಿಟ್ಟಿರುವುದು ಮಾಜಿ ಕ್ರಿಕೆಟಿಗರ ಟೀಕೆಗೆ ಕಾರಣವಾಗಿದೆ.
ಕಳೆದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ರನ್ನು ಏಷ್ಯಾಕಪ್ಗೆ ಪರಿಗಣಿಸದೆ ಹೋಗಿದ್ದು, ಮಾಜಿ ಕ್ರಿಕೆಟಿಗರು ಮಾತ್ರವಲ್ಲದೇ ಸ್ವತಃ ಶ್ರೇಯಸ್ ಅಯ್ಯರ್ ತಂದೆಗೆ ಅತೀವ ಬೇಸರ ಮೂಡಿಸಿದೆ. ಈ ಕುರಿತು ಕ್ರಿಕೆಟ್ ವಿಶ್ಲೇಷಕರು ಹಾಗೂ ಮಾಜಿ ಕ್ರಿಕೆಟಿಗರು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ. ಒಳ್ಳೆಯ ಬ್ಯಾಟರ್ಗೆ ತಂಡದಲ್ಲಿ ಸ್ಥಾನ ಕೊಡದಿರುವುದು ಸರಿಯಲ್ಲ ಎಂದಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಅಯ್ಯರ್ಗೆ ಮತ್ತೊಂದು ಶಾಕ್ ಎದುರಾಗಿದೆ.
ಈ ವರ್ಷದ ಆರಂಭದಲ್ಲಿ, ಟೆಸ್ಟ್ ನಾಯಕತ್ವ ಯಾರಿಗೆ ಹಸ್ತಾಂತರಿಸುವುದು ಎಂಬ ಚರ್ಚೆ ವ್ಯಾಪಕವಾಗಿತ್ತು, ಆದರೀಗ, ಗಮನ ಏಕದಿನ ಫಾರ್ಮೆಟ್ ಮೇಲೆ ಮೂಡಿದೆ. ಪ್ರಸ್ತುತ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ದಿಗ್ಗಜ ಬ್ಯಾಟರ್ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದು, ಏಕದಿನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಏಕದಿನ ಸ್ವರೂಪಕ್ಕೆ ಅವರ ನಾಯಕತ್ವ ಬಹುತೇಕ ಅನುಮಾನ ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ. ಈ ವಿಷಯ ಮುನ್ನೆಲೆಗೆ ಬಂದ ಹಿನ್ನೆಲೆ ಒಂದಷ್ಟು ವರದಿಗಳು, ಏಕದಿನ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ಎಂದಿವೆ.
ರೋಹಿತ್ ಬದಲಿಗೆ ಶ್ರೇಯಸ್ ಅಯ್ಯರ್ ಪ್ರಮುಖ ಸ್ಪರ್ಧಿ ಎಂಬ ವರದಿಗಳನ್ನು ತಳ್ಳಿಹಾಕಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ನನಗೆ ಇದೊಂದು ಸುದ್ದಿ ಅಷ್ಟೇ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).