ನಟಿ ಭಾನುಪ್ರಿಯಾ ಸ್ಥಿತಿ ಬೇರೆ ಯಾರಿಗೂ ಬಾರದಿರಲಿ: ಖ್ಯಾತ ನಿರ್ದೇಶಕನ ಶಾಕಿಂಗ್​ ಹೇಳಿಕೆ! Actress Bhanupriya

Actress Bhanupriya
Published on

Actress Bhanupriya : ನಟಿ ಭಾನುಪ್ರಿಯಾ ತಮ್ಮ ಸುಂದರ ಕಣ್ಣುಗಳಿಂದ ಎಲ್ಲ ಭಾಷೆಯ ಪ್ರೇಕ್ಷಕರ ಮನ ಗೆದ್ದ ಕಲಾವಿದೆ. ಸಿಂಹಾದ್ರಿ ಸಿಂಹ, ಕದಂಬ ಸಿನಿಮಾಗಳಲ್ಲಿ ಸಾಹಸಸಿಂಹ ದಿ. ವಿಷ್ಣುವರ್ಧನ್​ ಜತೆ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಭಾನುಪ್ರಿಯಾ ಅವರು ಓದುವ ಸಮಯದಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ತಮ್ಮ ನೃತ್ಯ ಮತ್ತು ನಟನಾ ಕೌಶಲ್ಯದಿಂದ ಅತ್ಯಂತ ಸುಂದರವಾದ ಪಾತ್ರಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದ ಭಾನುಪ್ರಿಯಾ, ಸದ್ಯ ಸಂಕಷ್ಟದಲ್ಲಿದ್ದಾರೆ. ಅವರ ಜೀವನದಲ್ಲಿನ ಕೆಲವು ಅನಿರೀಕ್ಷಿತ ಘಟನೆಗಳ ಬಗ್ಗೆ ನಿರ್ದೇಶಕ ಅಲೆಪ್ಪಿ ಅಶ್ರಫ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಭಾನುಪ್ರಿಯಾ ಅವರು ಈ ಹಿಂದೆ ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವಾಗ ತಾವು ಸ್ಮೃತಿಹೀನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರ ಮರೆವು ಎಷ್ಟರಮಟ್ಟಿಗೆ ಇದೆ ಅಂದರೆ, ನಟಿಸಲು ಹೋದಾಗ ತಮ್ಮ ಸಂಭಾಷಣೆಗಳನ್ನು ಮರೆತುಬಿಡುತ್ತಿದ್ದೆ ಎಂದು ಹೇಳಿದ್ದರು. ಬಹುಶಃ ಭಾನುಪ್ರಿಯಾ ಅವರು ಈ ಹಿಂದೆ ಚಾನೆಲ್‌ಗೆ ಹೇಳಿರುವುದನ್ನು ಸಹ ಮರೆತಿರಬಹುದು. ಆದರೆ, ಅವರೀಗ ನೃತ್ಯ ಮಾಡಲು ಸಹ ಸಾಧ್ಯವಿಲ್ಲ. ಅಲ್ಲದೆ, ತನ್ನ ಎಲ್ಲ ಡಾನ್ಸ್​ ಸ್ಟೆಪ್​ಗಳನ್ನು ಮರೆತಿದ್ದಾರೆ. ಶ್ರೀವಿದ್ಯಾ ಅವರಂತೆ ಭಾನುಪ್ರಿಯಾ ಅವರು ಸಹ ಡಾನ್ಸ್​ ಶಾಲೆಯನ್ನು ಪ್ರಾರಂಭಿಸಲು ಬಯಸಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿದಿದೆ ಎಂದು ಅಲೆಪ್ಪಿ ಅಶ್ರಫ್ ಹೇಳಿದ್ದಾರೆ.

ಅಂದಹಾಗೆ ಭಾನುಪ್ರಿಯಾ ಅವರು ತಮ್ಮ ವೃತ್ತಿಜೀವನದ ನಡುವೆಯೇ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದ ಡಿಜಿಟಲ್ ಎಂಜಿನಿಯರ್ ಆದರ್ಶ್ ಕೌಶಲ್ ಎಂಬುವರನ್ನು ವಿವಾಹವಾಗಿ ಅಮೆರಿಕದಲ್ಲಿ ನೆಲೆಸಿದರು. ದಂಪತಿಗೆ ಹೆಣ್ಣು ಮಗುವಿದೆ. ಅಮೆರಿಕದಿಂದ ಹಿಂತಿರುಗಿ ನಟಿಸಲು ಪ್ರಾರಂಭಿಸಿದರು. ಈ ವೇಳೆ ಡಿವೋರ್ಸ್​ ಆಗಿದೆ ಎಂಬ ವದಂತಿಗಳು ಹರಡಿದವು. ಆದರೆ, ಡಿವೋರ್ಸ್​ ಆಗಿಲ್ಲ ಎಂದು ಸ್ವತಃ ಭಾನುಪ್ರಿಯಾ ಅವರೇ ಬಹಿರಂಗಪಡಿಸಿದರು. ಹೀಗಿರುವಾಗ 2018ರಲ್ಲಿ ಅವರ ಪತಿ ಹೃದಯಾಘಾತದಿಂದ ಮೃತಪಟ್ಟರು. ಈ ಸುದ್ದಿ ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿತು ಭಾನುಪ್ರಿಯಾ ಹೇಳಿದ್ದರು.

ಇದಾದ ನಂತರ, ಭಾನುಪ್ರಿಯಾ ಅವರು ತನ್ನ ತಾಯಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋದರು. ಆ ಸಮಯದಲ್ಲಿ, ಎವಿಎಂ ಸ್ಟುಡಿಯೋ ಅವರಿಗೆ ಆಶ್ರಯ ನೀಡಿತು. ವಾಸಿಸಲು ಅಪಾರ್ಟ್​ಮೆಂಟ್​ ಮತ್ತು ಹಲವು ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸಲು ಅವಕಾಶವನ್ನು ನೀಡಿತು. ಭಾನುಪ್ರಿಯಾ ಅವರ ಮಗಳು ಲಂಡನ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಭಾನುಪ್ರಿಯಾಗೆ ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ. ಇದೀಗ ತಾಯಿಯೂ ಒಂದಾಗಿದ್ದಾರೆ. ಭಾನುಪ್ರಿಯಾ ಅವರು ಉನ್ನತ ಸ್ಥಾನದಲ್ಲಿದ್ದಾಗಲೂ ಅವರ ನಡವಳಿಕೆ ಸಾಧಾರಣವಾಗಿತ್ತು. ಎಲ್ಲಿಯೂ ಅಹಂ ಅನ್ನೋದು ಇರಲಿಲ್ಲ ಎಂದು ಅಲೆಪ್ಪಿ ಅಶ್ರಫ್ ಹೇಳಿದರು.

ಆಕೆಗೆ ನೆನಪುಗಳು ಮರೆಯಾಗುತ್ತಿವೆಯೇ? ಬೇರೆ ಯಾರಿಗೂ ಈ ಪರಿಸ್ಥಿತಿ ಬಾರದಿರಲಿ ಎಂಬ ಶೀರ್ಷಿಕೆಯೊಂದಿಗೆ ಅಲೆಪ್ಪಿ ಅಶ್ರಫ್ ಅವರು ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net