3.5 ಲಕ್ಷ ಕೆಜಿ ಬ್ಲೀಚಿಂಗ್​ ಪೌಡರ್​, 75 ಸಾವಿರ ಲೀಟರ್ ಫಿನಾಯಿಲ್... ಮಹಾಕುಂಭದ ಸ್ವಚ್ಛತೆ ಹಿಂದಿದೆ ಭಾರಿ ಕಸರತ್ತು! Maha Kumbh Mela

Maha Kumbh Mela
Published on

Maha Kumbh Mela : ಪ್ರಯಾಗ್‌ರಾಜ್​ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಉತ್ಸವ ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಪ್ರತಿದಿನವೂ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದೇ ಉತ್ತರ ಪ್ರದೇಶ ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿದೆ. ಅಲ್ಲದೆ, ಸ್ವಚ್ಛತೆಯ ಹಿಂದೆ ಭಾರೀ ಕಸರತ್ತೇ ನಡೆಯುತ್ತಿದೆ.

ಪ್ರತಿದಿನ ಪ್ರಯಾಗ್​ರಾಜ್​ನ ಸಂಗಮದಲ್ಲಿ ಲಕ್ಷಾಂತರ ಮಂದಿ ಶಾಹಿ ಸ್ನಾನ ಮಾಡುತ್ತಿದ್ದಾರೆ. ಹೀಗಾಗಿ ಸಾಕಷ್ಟು ಕೊಳಕು ಹರಡುತ್ತಿದ್ದು ಅದರ ಸ್ವಚ್ಛತೆಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ತುಂಬಾ ಶ್ರಮಿಸುತ್ತಿವೆ. 1.5 ಲಕ್ಷ ಶೌಚಾಲಯಗಳು ಸೇರಿದಂತೆ ಕುಂಭಮೇಳ ಪ್ರದೇಶದ ಸ್ವಚ್ಛತೆಗಾಗಿ 1 ಕೋಟಿ ಲೀಟರ್‌ಗಿಂತಲೂ ಅಧಿಕ ಕ್ಲೀನಿಂಗ್ ಲಿಕ್ವಿಡ್​ ಬಳಸಲಾಗುತ್ತಿದೆ. ಟಾಯ್ಲೆಟ್​ಗಳನ್ನು ಶುಚಿಯಾಗಿಡಲು ಸುಧಾರಿತ ಆಕ್ಸಿಡೇಷನ್​ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಉತ್ತರ ಪ್ರದೇಶ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯದ ಜತೆ ಕೈಜೋಡಿಸಿದೆ.

ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾಯಿತು. ಅಂದಿನಿಂದ ಆ ಪ್ರದೇಶದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಸ್ವಚ್ಛತಾ ಏಜೆಂಟ್‌ಗಳನ್ನು ನಿಯೋಜಿಸಿದ್ದು, ಇಲ್ಲಿಯವರೆಗೆ 3.5 ಲಕ್ಷ ಕೆಜಿ ಬ್ಲೀಚಿಂಗ್ ಪೌಡರ್, 75,600 ಲೀಟರ್ ಫಿನಾಯಿಲ್ ಮತ್ತು 41,000 ಕೆಜಿ ಮಾಲಾಥಿಯಾನ್ ಬಳಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಇದುವರೆಗೆ ಸುಮಾರು 50 ಕೋಟಿಗೂ ಹೆಚ್ಚು ಭಕ್ತರನ್ನು ಕುಂಭಮೇಳ ಸ್ವಾಗತಿಸಿದೆ.

ಯಾವುದೇ ಕೆಟ್ಟ ರಾಸಾಯನಿಕಗಳನ್ನು ಬಳಸದೇ ಪರಿಸರ ಸ್ನೇಹಿ ಸ್ವಚ್ಛತಾ ಪರಿಹಾರಗಳನ್ನು ಮಾತ್ರ ಬಳಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕುಂಭಮೇಳ ಆರಂಭಕ್ಕೂ ಮುನ್ನವೇ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಬಲಿಷ್ಠವಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ಆಗಾಗ ಸ್ವಚ್ಛತೆಯನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳ ತಂಡವೇ ಇದೆ. ಪ್ರಯಾಗ್‌ರಾಜ್‌ನ ಬಸ್ವರ್ ಸ್ಥಾವರದಲ್ಲಿ ಪ್ರತಿದಿನ ಸುಮಾರು 650 ಮೆಟ್ರಿಕ್ ಟನ್ ಕಸವನ್ನು ಸಂಸ್ಕರಿಸಲಾಗುತ್ತದೆ. ಆದರೆ, ತೇವಾಂಶಭರಿತ ತ್ಯಾಜ್ಯವನ್ನು ನಿರ್ವಹಿಸಲು 350 ಹೀರುವ ಯಂತ್ರಗಳನ್ನು ನಿಯೋಜಿಸಲಾಗಿದೆ. ಸಂಗಮ್‌ನಲ್ಲಿ ನದಿಗಳಲ್ಲಿನ ಮಾಲಿನ್ಯವನ್ನು ತಡೆಗಟ್ಟಲು, ನಗರದಲ್ಲಿರುವ ಮೂರು ಶಾಶ್ವತ ಎಸ್‌ಟಿಪಿಗಳ ಜೊತೆಗೆ ಮೂರು ತಾತ್ಕಾಲಿಕ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸಹ ಸ್ಥಳದಲ್ಲಿ ಸ್ಥಾಪಿಸಲಾಗಿದೆ. ನೈರ್ಮಲ್ಯ ಪ್ರಯತ್ನಗಳ ಮೇಲ್ವಿಚಾರಣೆಗೆ ವೈದ್ಯಕೀಯ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ವಲಯ ಉಸ್ತುವಾರಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಈ ಬಗ್ಗೆ ನೈರ್ಮಲ್ಯ ಸೇವೆಗಳ ನೋಡಲ್ ಅಧಿಕಾರಿ ಆಕಾಂಶಾ ರಾಣಾ ಅವರು ಮಾತನಾಡಿದ್ದು, 70,827 ಲೀಟರ್‌ಗೂ ಹೆಚ್ಚು ಕ್ಲೀನಿಂಗ್​ ಏಜೆಂಟ್‌ಗಳು, 70,582 ಲೀಟರ್ ಫಿನಾಯಿಲ್ ಸಾಂದ್ರತೆ, 3.53 ಲಕ್ಷ ಕೆಜಿ ಬ್ಲೀಚಿಂಗ್ ಪೌಡರ್, 1,675 ಕೆಜಿ ನಾಫ್ಥಲೀನ್ ಮತ್ತು 39,812 ಕೆಜಿ ಮಾಲಾಥಿಯಾನ್​ ಅನ್ನು ನೈರ್ಮಲ್ಯ ಕಾರ್ಮಿಕರಿಗೆ ವಿತರಿಸಲಾಗಿದೆ ಎಂದು ಹೇಳಿದರು.

ಮಹಾಕುಂಭದ ಉದ್ದಕ್ಕೂ ತಾಜಾ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳಲು ಬೆಂಗಳೂರು ವಿಶ್ವವಿದ್ಯಾಲಯದ ಆಕ್ಸಿಡೀಕರಣ ತಂತ್ರಜ್ಞಾನಕ್ಕೆ ರಾಣಾ ಮನ್ನಣೆ ನೀಡಿದ್ದಾರೆ. ಹಿಂದಿನ ಅನುಭವಗಳಿಂದ ಪಾಠ ಕಲಿತಿರುವ ಕುಂಭಮೇಳದ ಆಡಳಿತ ಮಂಡಳಿಯೂ ಸ್ವಚ್ಛತಾ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲು ಪೂರ್ವಭಾವಿ ಕ್ರಮಗಳನ್ನು ಸಹ ತೆಗೆದುಕೊಂಡಿದೆ. ಇದರಲ್ಲಿ ಕುಡಿಯುವ ನೀರು, ವಿದ್ಯುತ್ ಮತ್ತು ಶೌಚಾಲಯಗಳು ಸೇರಿದಂತೆ ಮಾದರಿ ನೈರ್ಮಲ್ಯ ವಸಾಹತುಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಸ್ವಚ್ಛತಾ ಕಾರ್ಮಿಕರ ಮಕ್ಕಳಿಗಾಗಿ ಪ್ರಾಥಮಿಕ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಸಹ ಸ್ಥಳದಲ್ಲಿ ಸ್ಥಾಪಿಸಲಾಗಿದೆ.

ಈಗ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಎರಡು ವಾರಗಳಿಗೊಮ್ಮೆ ವೇತನವನ್ನು ಪಡೆಯುತ್ತಾರೆ. ಇದರಿಂದಾಗಿ ಮಧ್ಯವರ್ತಿಗಳ ಸಮಸ್ಯೆಯೂ ನಿವಾರಣೆಯಾಗಿದೆ. ಸಮುದಾಯ ಅಡುಗೆಮನೆಗಳ ಮೂಲಕ ಸ್ವಚ್ಛತಾ ಕಾರ್ಮಿಕರಿಗೆ ಉಚಿತ ಊಟವನ್ನು ಸಹ ಒದಗಿಸಲಾಗುತ್ತಿದೆ ಮತ್ತು ಕಾರ್ಮಿಕರನ್ನು ಆರೋಗ್ಯ, ಜೀವ ಮತ್ತು ಅಪಘಾತ ವಿಮಾ ಯೋಜನೆಗಳ ವ್ಯಾಪ್ತಿಗೆ ಸೇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net