ಬಹುನಿರೀಕ್ಷಿತ 'ಲಕ್ಷ್ಮೀ' ನೋಡಿದ ಜನ ಏನಂತಾರ ಗೊತ್ತಾ?

Laxmi - Final
Published on

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ಬಹುನಿರೀಕ್ಷಿತ ಚಿತ್ರವಾದ 'ಲಕ್ಷ್ಮೀ' ಕೊನೆಗೂ ಸೋಮವಾರ ರಾತ್ರಿ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ಈ ಚಿತ್ರ ಸಾಕಷ್ಟು ಹೈಪ್​ ಹುಟ್ಟುಹಾಕಿದ್ದಷ್ಟೇ ಅಲ್ಲ, ಅತೀ ಹೆಚ್ಚು ಬೆಲೆಗೆ ಓಟಿಟಿಗೆ ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇಷ್ಟೆಲ್ಲಾ ಸದ್ದು ಮಾಡಿದ ಈ ಈ ಚಿತ್ರ ಹೇಗಿದೆ? ಜನ ಮತ್ತು ವಿಮರ್ಶಕರು ಈ ಚಿತ್ರದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ಸಹಜ.

'ಲಕ್ಷ್ಮೀ' ನೋಡಿದ ಜನರ ಬಹುತೇಕ ಒಂದೇ ಅಭಿಪ್ರಾಯ. ಬಹುಶಃ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸದಿದ್ದರೆ, ಈ ಚಿತ್ರದಲ್ಲಿ ಏನೂ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಅಕ್ಷಯ್​ ಕುಮಾರ್​ ಅಭಿನಯ ಬಿಟ್ಟರೆ, ಚಿತ್ರ ಸ್ವಲ್ಪವೂ ಚೆನ್ನಾಗಿಲ್ಲ, ಇದೊಂದು ನಾನ್​ಸೆನ್ಸ್​ ಚಿತ್ರ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಬರೀ ಜನರಷ್ಟೇ ಅಲ್ಲ, ಎಲ್ಲಾ ಖ್ಯಾತ ಪತ್ರಿಕೆಗಳ ಮತ್ತು ವೆಬ್​ಸೈಟ್​ಗಳ ವಿಮರ್ಶೆಗಳಲ್ಲೂ ಇದು ವ್ಯಕ್ತವಾಗಿದ್ದು, ಹಲವು ವಿಮರ್ಶಕರು ಚಿತ್ರಕ್ಕೆ ಎರಡು, ಎರಡೂವರೆ ಸ್ಟಾರ್​ಗಳನ್ನು ಕೊಟ್ಟಿದ್ದಾರೆ. ಚಿತ್ರವನ್ನು ಕೂತು ನೋಡುವದೇ ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.

ಇದೇ ಚಿತ್ರ ಮೊದಲಿಗೆ ತಮಿಳಿನಲ್ಲಿ 'ಕಾಂಚನಾ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಕನ್ನಡಕ್ಕೆ ಉಪೇಂದ್ರ ಅಭಿನಯದಲ್ಲಿ 'ಕಲ್ಪನಾ' ಎಂದು ರೀಮೇಕ್​ ಆಗಿತ್ತು. ಈ ಎರಡು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ, ಹಿಂದಿಗೆ 'ಲಕ್ಷ್ಮೀ' ಎಂಬ ಹೆಸರಿನಲ್ಲಿ ರೀಮೇಕ್​ ಆಗಿತ್ತು.

ಕೆಲವು ದಿನಗಳ ಹಿಂದೆ 'ಲಕ್ಷ್ಮೀ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿ ಸಾಕಷ್ಟು ಹಿಟ್​ ಆಗಿತ್ತು. ಆದರೆ, ಟ್ರೈಲರ್​ ಚೆನ್ನಾಗಿದೆ ಎಂದ ಮಾತ್ರಕ್ಕೆ ಚಿತ್ರ ಚೆನ್ನಾಗಿರಲೇಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net